ಸಾರಿಗೆ ಬಸ್ ಪ್ರಯಾಣ ದರ ಏರಿಕೆಗೆ ಪ್ರತಿಪಕ್ಷಗಳ ಆಕ್ರೋಶ
ಬೆಂಗಳೂರು : ‘ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯನ್ನು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ಖಂಡಿಸಿದ್ದು, ‘ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ವೈಫಲ್ಯಗಳಿಗೆ ಬಡಜನರ ಮೇಲೆ ಮತ್ತೊಂದು ದರ ಏರಿಕೆಯ ಬರೆ’ ಎಳೆದಿದೆ. ಕಿತ್ಕೊಂಡ್ ತಿನ್ನೋ, ಕಿತ್ತೋದ್ ಕಾಂಗ್ರೆಸ್ ಸರಕಾರ’ ಎಂದು ಬಿಜೆಪಿ ಲೇವಡಿ ಮಾಡಿದೆ.
ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ‘ಹಾಲು, ಮೊಸರು, ವಿದ್ಯುತ್ ದರಗಳನ್ನು ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿರುವ ಈ ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಇನ್ನೂ ತೃಪ್ತಿಯಾದಂತಿಲ್ಲ. ಈಗ ಬಸ್ ದರದ ಸರದಿ. ಬೆಂಗಳೂರಿನಲ್ಲಿ ಕನಿಷ್ಠ ಟಿಕೆಟ್ 6ರೂ.ನಿಂದ 10 ರೂ.ಅಂದರೆ ಸುಮಾರು ಶೇ.67ರಷ್ಟು ಏರಿಕೆ. ಕೆಎಸ್ಸಾರ್ಟಿಸಿಯಲ್ಲಿ ಗರಿಷ್ಠ 9ರೂ.ಏರಿಕೆ, ಒಟ್ಟಾರೆ 4ರಿಂದ 20ರೂ.ಗಳ ವರೆಗೆ ಜನರ ಮೇಲೆ ಹೊರೆ ಹೊರಸಿರುವ ಈ ಸರಕಾರ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವುದಿರಲಿ, ಕನಿಷ್ಠ ಮಾನವೀಯತೆಯನ್ನೂ ಉಳಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.
‘ದುಡಿಯಲು ಹೊರಡುವ ಕಾರ್ಮಿಕ, ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಆಸ್ಪತ್ರೆಗೆ ಹೊರಡುವ ಬಡ ರೋಗಿಗಳು, ಸಾಮಾನ್ಯ ಜನರು ನಿಮ್ಮ ಕಾಂಗ್ರೆಸ್ ಸರಕಾರದ ಕೆಟ್ಟ ಆರ್ಥಿಕ ನಿರ್ವಹಣೆಗೆ ಬೆಲೆ ತೆರಬೇಕೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ?. ಒಂದೆಡೆ ಗ್ಯಾರಂಟಿಗಳನ್ನು ಕೊಟ್ಟಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಎರಡೂ ಕೈಗಳಿಂದ ಜನರ ಜೇಬು ದೋಚುವುದೇ ಈ ಸರಕಾರದ ಆಡಳಿತ ಮಂತ್ರವಾಗಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣವನ್ನೂ ದುಬಾರಿಯಾಗಿಸಿರುವ ಸರಕಾರ, ಜನರ ದಿನನಿತ್ಯದ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅವರು ದೂರಿದ್ದಾರೆ.
ಈ ರೀತಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಜನರ ಜೀವನವನ್ನೇ ದುಸ್ತರ ಮಾಡಿರುವ ಈ ಜನವಿರೋಧಿ ಕಾಂಗ್ರೆಸ್ ಸರಕಾರ ಜನಾಕ್ರೋಶವನ್ನು ಎದುರಿಸುವ ದಿನ ದೂರವಿಲ್ಲ. ಮೊದಲು ಸಾರಿಗೆ ನಿಗಮಗಳ ನಷ್ಟದ ಪೂರ್ಣ ಲೆಕ್ಕವನ್ನು ಜನರ ಮುಂದಿಡಿ, ಈ ದರ ಏರಿಕೆಯನ್ನು ತಕ್ಷಣ ಹಿಂಪಡೆಯಿರಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಜನರಿಗೆ ಯಾಕೆ ಶಿಕ್ಷೆ: ‘ಸಿಎಂ ಡಿ.ಕೆ.ಶಿವಕುಮಾರ್ ರೇ ನಿಮಗೆ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಜನತೆ ಕೇಳಿದ್ದರೇ?. ನಿಮ್ಮ ಅಧಿಕಾರದ ಸ್ವಾರ್ಥಕ್ಕೆ ಜನರನ್ನು ಯಾಮಾರಿಸಿ, ಅಧಿಕಾರ ಹಿಡಿದು ಬೊಕ್ಕಸ ಬರಿದು ಮಾಡಿದಷ್ಟೇ ಅಲ್ಲದೇ, ಮೂರೂವರೆ ವರುಷಗಳಿಂದ ನಿರಂತರವಾಗಿ ಬೆಲೆಗಳನ್ನು ಏರಿಸಿ ಜನರಿಗೆ ಯಾಕೆ ಶಿಕ್ಷೆ ನೀಡುತ್ತಿದ್ದೀರಿ?. ನಿಮ್ಮ ಭ್ರಷ್ಟ ದುರಾಡಳಿತಕ್ಕೆ ರಾಜ್ಯದ ಜನತೆಯ ಪರವಾಗಿ ನಮ್ಮ ಧಿಕ್ಕಾರ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ವೈಫಲ್ಯಗಳಿಗೆ ಬಡಜನರ ಮೇಲೆ ಮತ್ತೊಂದು ದರ ಏರಿಕೆಯ ಬರೆ!
ಹಾಲು, ಮೊಸರು, ವಿದ್ಯುತ್ ದರಗಳನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ತೃಪ್ತಿಯಾದಂತಿಲ್ಲ! ಈಗ ಬಸ್ ದರದ ಸರದಿ!
ಬೆಂಗಳೂರಿನಲ್ಲಿ ಕನಿಷ್ಠ ಟಿಕೆಟ್ 6 ರೂ, ನಿಂದ 10 ರೂ. ಅಂದರೆ ಸುಮಾರು ಶೇ. 67ರಷ್ಟು ಏರಿಕೆ! KSRTC ಯಲ್ಲಿ ಗರಿಷ್ಠ 9 ರೂ. ಏರಿಕೆ, ಒಟ್ಟಾರೆ 4 ರಿಂದ 20 ರೂ.ರವರೆಗೆ ಜನರ ಮೇಲೆ ಹೊರೆ ಹೊರಸಿರುವ ಈ @INCKarnataka ಸರ್ಕಾರ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವುದಿರಲಿ, ಕನಿಷ್ಠ ಮಾನವೀಯತೆಯನ್ನೂ ಕೂಡ ಉಳಿಸಿಕೊಂಡಿಲ್ಲ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಎಂದು ಸಾರಿಗೆ ಸಚಿವರು ಹೇಳಿದ್ದಾರೆ!
ದುಡಿಯಲು ಹೊರಡುವ ಕಾರ್ಮಿಕ, ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಆಸ್ಪತ್ರೆಗೆ ಹೊರಡುವ ಬಡ ರೋಗಿಗಳು, ಸಾಮಾನ್ಯ ಜನರು ನಿಮ್ಮ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಗೆ ಬೆಲೆ ತೆರಬೇಕೇ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ?
ಒಂದೆಡೆ ಗ್ಯಾರಂಟಿಗಳನ್ನು ಕೊಟ್ಟಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಎರಡೂ ಕೈಗಳಿಂದ ಜನರ ಜೇಬು ದೋಚುವುದೇ ಈ ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರವಾಗಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣವನ್ನೂ ದುಬಾರಿಯಾಗಿಸಿರುವ ಸರ್ಕಾರ, ಜನಸಾಮಾನ್ಯರ ದಿನನಿತ್ಯದ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.
ಈ ರೀತಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಜನರ ಜೀವನವನ್ನೇ ದುಸ್ತರ ಮಾಡಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಜನಾಕ್ರೋಶವನ್ನು ಎದುರಿಸುವ ದಿನ ದೂರವಿಲ್ಲ! ಮೊದಲು ಸಾರಿಗೆ ನಿಗಮಗಳ ನಷ್ಟದ ಪೂರ್ಣ ಲೆಕ್ಕವನ್ನು ಜನರ ಮುಂದಿಡಿ, ಈ ದರ ಏರಿಕೆಯನ್ನು ತಕ್ಷಣ ಹಿಂಪಡೆಯಿರಿ ಎಂದು ಅತ್ಯಂತ ತೀವ್ರವಾಗಿ ಆಗ್ರಹಿಸುತ್ತೇವೆ.
#CongressFailsKarnataka #Pricehike
— Vijayendra Yediyurappa (@BYVijayendra) November 4, 2026