ವಕೀಲರ ಪ್ರತಿಭಟನೆ ವೇಳೆ ಕೋರ್ಟ್ ಸಭಾಂಗಣದಲ್ಲಿ ಗದ್ದಲ; ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು: ವಕೀಲರ ಮೇಲಿನ ಹಿಂಸಾಚಾರ ಖಂಡಿಸಿ ಬೆಂಗಳೂರು ವಕೀಲರ ಸಂಘ ಕರೆ ನೀಡಿದ್ದ ಪ್ರತಿಭಟನೆಯ ವೇಳೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಹೈಕೋರ್ಟ್ ಮಂಗಳವಾರ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಮಂಗಳವಾರ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ ವಕೀಲರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಂಗಳೂರು ವಕೀಲರ ಸಂಘಕ್ಕೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ, ಮೇಲ್ನೋಟಕ್ಕೆ, ಈ ವರ್ತನೆಯು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಲು ಯತ್ನಿಸಿದವರನ್ನು ಗುರುತಿಸಲು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿರುವ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19ಕ್ಕೆ ನಿಗದಿಪಡಿಸಿದೆ.
ಕರ್ನಾಟಕದಲ್ಲಿ ವಿವಿಧೆಡೆ ವಕೀಲರ ಮೇಲೆ ನಡೆದಿರುವ ಇತ್ತೀಚಿನ ಹಲ್ಲೆ ಪ್ರಕರಣಗಳ ಹಿನ್ನೆಲೆಯಲ್ಲಿ, ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಅನ್ನು ಬಲಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ), ಬೆಂಗಳೂರು ವಕೀಲರ ಸಂಘ (ಎಎಬಿ) ಹಾಗೂ ರಾಜ್ಯದ ವಿವಿಧ ವಕೀಲರ ಸಂಘಗಳು ಮಂಗಳವಾರ ಪ್ರತಿಭಟನೆಗೆ ಕರೆ ನೀಡಿದ್ದವು. ಈ ಪ್ರತಿಭಟನೆಯ ನಡುವೆಯೇ ಕೆಲವು ವಕೀಲರು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣಕ್ಕೆ ಪ್ರವೇಶಿಸಿ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ ಸೃಷ್ಟಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿ ಆದೇಶ ಹೊರಡಿಸಿದ ಬಳಿಕ ವಕೀಲರ ಸಂಘದ ಖಜಾಂಚಿ ಶ್ವೇತಾ ರವಿಶಂಕರ್ ನ್ಯಾಯಪೀಠದ ಮುಂದೆ ಹಾಜರಾಗಿ ಘಟನೆಯ ಕುರಿತು ವಿವರಣೆ ನೀಡಲು ಮುಂದಾದರು. ಆದರೆ, ನ್ಯಾಯಾಲಯದ ಸಭಾಂಗಣಕ್ಕೆ ಪ್ರವೇಶಿಸಿ ಗದ್ದಲ ಸೃಷ್ಟಿಸುವ ವಕೀಲರ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ವಕೀಲರ ಪರವಾಗಿ ಕ್ಷಮೆಯಾಚಿಸಲು ಶ್ವೇತಾ ರವಿಶಂಕರ್ ಮುಂದಾದಾಗ ನ್ಯಾಯಪೀಠ, ಯಾವ ಕ್ಷಮಾಪಣೆ? (ಕಲಾಪಕ್ಕೆ ಅಡ್ಡಿಪಡಿಸಿದ) ವಕೀಲರು ಕ್ಷಮೆಯಾಚಿಸಲು ಬಯಸಿದರೆ ಆ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಇದು ಎಂತಹ ವರ್ತನೆ? ನೀವು ವಕೀಲರೇ? ನೀವು ನ್ಯಾಯಾಲಯದ ಅಧಿಕಾರಿಗಳು. ನಿಮ್ಮ ಜವಾಬ್ದಾರಿಗಳನ್ನು ಹೀಗೆ ಬದಿಗಿಟ್ಟು ವರ್ತಿಸಲು ಸಾಧ್ಯವಿಲ್ಲ. ಇದು ವಕೀಲರಿಗೆ ಸಂಪೂರ್ಣವಾಗಿ ಶೋಭೆ ತರುವುದಿಲ್ಲ ಎಂದು ಆಕ್ಷೇಪಿಸಿತು.
ಶ್ವೇತಾ ರವಿಶಂಕರ್ ಅವರು, ಇಂದಿನ ಮಟ್ಟಿಗೆ ವಿನಾಯಿತಿ ನೀಡುವಂತೆ ಕೋರಿದರಲ್ಲದೆ, ಸಂಘದ ಎಲ್ಲ ಪದಾಧಿಕಾರಿಗಳು ಮರುದಿನ ನ್ಯಾಯಾಲಯದ ಮುಂದೆ ಹಾಜರಾಗಿ ಸಂಘದ ಪರವಾಗಿ ಪ್ರಮಾಣಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಆದರೆ, ಈಗಾಗಲೇ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿರುವುದರಿಂದ ಸಂಘವು ವಿಚಾರಣೆಗೆ ಉತ್ತರಿಸಲೇಬೇಕು. ಇದು ನ್ಯಾಯಾಲಯದ ಎದುರೇ ನಡೆದ ನ್ಯಾಯಾಂಗ ನಿಂದನೆಯಾಗಿದೆ. ನಿಮ್ಮ ಉತ್ತರ ಸಲ್ಲಿಸಿ, ಮುಂದೇನು ಮಾಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ನ್ಯಾಯಪೀಠ ಹೇಳಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ವಕೀಲರು ಇಂದು ನ್ಯಾಯಾಲಯಕ್ಕೆ ಹಾಜರಾಗದಿದ್ದರೂ ಯಾವುದೇ ಪ್ರತಿಕೂಲ ಆದೇಶಗಳನ್ನು ಹೊರಡಿಸುವುದಿಲ್ಲ ಎಂದು ಈ ಹಿಂದೆ ಭರವಸೆ ನೀಡಿದ್ದರೂ, ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಿರುವುದಕ್ಕೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದು ರಾಜ್ಯದ ಹೈಕೋರ್ಟ್. ಯಾರಾದರೂ ಒಳನುಗ್ಗಿ ಗದ್ದಲ ಸೃಷ್ಟಿಸಬಹುದು ಎಂದು ನೀವು ಭಾವಿಸಿದರೆ, ಅದರ ಪರಿಣಾಮಗಳನ್ನು ಎದುರಿಸಲೇಬೇಕು ಎಂದು ಎಚ್ಚರಿಸಿತು.
ಅಂತಿಮವಾಗಿ ಬೆಂಗಳೂರು ವಕೀಲರ ಸಂಘ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯ, ಸಂಬಂಧಪಟ್ಟವರ ವಾದ ಆಲಿಸಿದ ಬಳಿಕ ಮುಂದಿನ ಕ್ರಮವನ್ನು ನಿರ್ಧರಿಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.