ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ : ಬಿ.ವೈ.ವಿಜಯೇಂದ್ರ
"ವಂದೇ ಮಾತರಂ ಗೀತೆಗೆ ಗೌರವ ಕೊಡದ ಕಾಂಗ್ರೆಸ್"
ಬೆಂಗಳೂರು : ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯುತ್ತದೆ. ಆದರೆ ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯದಲ್ಲಿ ವಿಶ್ವಾಸವಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶದ ಜನರಿಗೆ ದೇಶಾಭಿಮಾನದ ಕಿಚ್ಚು ಹಚ್ಚಿದ್ದ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಕಾಂಗ್ರೆಸ್, ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ಬೆಂಬಲಿಸುತ್ತದೆ. ಆದರೆ ಬಿಜೆಪಿ ದೇಶದ ಎಲ್ಲಾ ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತಿದೆ ಎಂದು ತಿಳಿಸಿದರು.
ಮೀಸಲಾತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೆ ಹೇಳಿದ್ದೊಂದು ಆದರೆ ನಡೆದುಕೊಂಡಿದ್ದೇ ಒಂದು. ಒಟ್ಟಾಗಿ, ಒಂದಾಗಿ ದೇಶವನ್ನು ಮುನ್ನಡೆಸಲು ಬಿಜೆಪಿ ಮುಂದಾದರೆ ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸಿಕೊಂಡು ಮತ ಪಡೆಯಲು ನೋಡುತ್ತಿದೆ ಎಂದು ದೂರಿದರು.
ಭಾರತ್ ಜೋಡೊ.. ಕಿವಿ ಮೇಲೆ ಹೂ.. :
ಗ್ಯಾರಂಟಿ ಇಲ್ಲದೆ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂದು ಮನವರಿಕೆ ಆಗಿರುವ ಕಾಂಗ್ರೆಸ್ ಈಗ ಭಾರತ್ ಜೋಡೊ ಸಂಘಗಳ ಮೂಲಕ ರಾಜ್ಯದ ಜನರಿಗೆ ಕಿವಿ ಹೂ ಮುಡಿಸಿ ಅಧಿಕಾರಕ್ಕೆ ಬರಬಹುದು ಎಂದು ಹೊರಟಿದೆ. ಆದರೆ ಪ್ರಧಾನಿ ಮೋದಿ ಅವರು 2047 ರ ವೇಳೆಗೆ ವಿಕಸಿತ ಭಾರತ ಆಗಬೇಕು, ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಬೇಕು, ಸಮಾಜದ ಕಟ್ಟಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎಂಬ ಇಚ್ಛಾಶಕ್ತಿ ಹೊಂದಿದ್ದಾರೆ. ನಾನು ಪ್ರಧಾನಿ ಅಲ್ಲ ಪ್ರಧಾನ ಸೇವಕ ಎಂಬ ಭಾವವನೆಯಿಂದ ಭಾರತವನ್ನು ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
ಬಿಜೆಪಿ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಇದ್ದಾಗ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಲ್ಲಿಸಿದ್ದರು. ಕೇಂದ್ರದಲ್ಲಿ ಮೋದಿ ಅವರ ಸಂಪುಟದ 71 ಸಚಿವರಲ್ಲಿ 37 ಸಚಿವರು ಹಿಂದುಳಿದ ಸಮುದಾಯದವರಿದ್ದಾರೆ. ವಿಶ್ವಕರ್ಮ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಗಮನ ಸೆಳೆದರು.
ಗೊಲ್ಲ ಸಮುದಾಯಕ್ಕೆ ಆದ್ಯತೆ :
ಸ್ವಾಭಿಮಾನಕ್ಕೆ ಇರುವ ಮತ್ತೊಂದು ಹೆಸರು ಗೊಲ್ಲ ಸಮುದಾಯ. ಅವರಲ್ಲಿ ಬಡತನ ಇರಬಹುದು ಆದರೆ ಸ್ವಾಭಿಮಾನಿಗಳು. ಎಸ್‍ಸಿ/ಎಸ್‍ಟಿಗಳಿಗೆ ಮೀಸಲಾತಿಯಂತೆ ಗೊಲ್ಲ ಸಮುದಾಯಕ್ಕೂ ಅವಕಾಶ ಸಿಗಬೇಕು. ಇದಕ್ಕಾಗಿ ಬಿಜೆಪಿ ಮುಂದೆ ಪ್ರಯತ್ನ ಮಾಡಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಎಲ್ಲಾ ಸಮುದಾಯಗಳಿಗೆ ಅನ್ಯಾಯ ಮಾಡ್ತ ಇದೆ. ಗೊಲ್ಲ ಸಮುದಾಯ ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ. ಶೈಕ್ಷಣಿಕವಾಗಿ ಮುಂದೆ ಬರಬೇಕು. ಅವರಿಗೂ ರಾಜಕೀಯ ಪ್ರಾತಿನಿದ್ಯ ಸಿಗಬೇಕು. ಮೀಸಲಾತಿ ಬಗ್ಗೆ ಚಿವುಟುವ ಕಾಂಗ್ರೆಸ್ ಮತ್ತೊಂದು ಕಡೆ ಕಣ್ಣೀರು ಒರೆಸುವ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು.
ಡಿಕೆಶಿ ಹಗಲುಗನಸು ಕಾಣ್ತ ಇದ್ದಾರೆ :
2028ರ ಚುನಾವಣೆ ನಂತರ ಮತ್ತೆ ನಾನೇ ಎಂದು ಡಿಕೆಶಿ ಹಗಲುಗನಸು ಕಾಣ್ತ ಇದ್ದಾರೆ. ಆದರೆ ಈ ಕನಸು ನನಸಾಗುವುದಿಲ್ಲ ಎಂಬ ಅರಿವೂ ಅವರಿಗೆ ಇದೆ. ಆದರೆ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆಗ ಗೊಲ್ಲ ಸಮುದಾಯದ ಅಪೇಕ್ಷೆಗಳನ್ನು ಈಡೇರಿಸಲು ಮುಂದಾಗುತ್ತೇವೆ. ನಮ್ಮ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಪಂಚ ಗ್ಯಾರಂಟಿ ನೆಪ ಹೇಳಿದ ಕಾಂಗ್ರೆಸ್ ರಾಜ್ಯದ ಜನರಿಗೆ ದ್ರೋಹ ಬಗೆದಿದೆ ಎಂದರು.
ಅಧಿಕಾರ ಬಳಸಿ ಟನಲ್ ರಸ್ತೆ, ಬಿಡದಿ ಟೌನ್ ಶಿಪ್, ಕನಕಪುರ ವಿಮಾನ ನಿಲ್ದಾಣ ಮಾಡಿಕೊಂಡು ಬಿಡಬೇಕು ಎಂದು ಹೊಂಚು ಹಾಕಿದ್ದಾರೆ. ಇವರಿಗೆ ಬಡವರು, ರೈತರು ಬಗ್ಗೆ ಕಾಳಜಿ ಇಲ್ಲ. ಭಾರತ್ ಜೋಡೊ ಯುವಕರ ಸಂಘ ಮಾಡಲು ಮುಂದಾಗಿರುವ ಇವರಿಗೆ ತಾಲೂಕು ತಾಲೂಕಿನ ಮೂಲೆ ಮೂಲೆಯಲ್ಲಿ ಇಸ್ಪೀಟ್ ದಂಧೆ, ಡ್ರಗ್ಸ್ ಮಾಫಿಯಾ ಹೆಚ್ಚಿರುವುದು ತಿಳಿಯುವುದಿಲ್ಲ. ಯುವಕ ಸಂಘಕ್ಕೆ ಹಣ ಕೊಡ್ತೇವೆ ಎನ್ನುವ ಇವರು ಎರಡೂವರೆ ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿಲ್ಲ ಎಂದು ದೂರಿದರು.
ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್, ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ವಿಧಾನ ಪರಿಷತ್ತಿನ ಸದಸ್ಯ ಹಾಗೂ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಮಹಿಳಾ ಮೋರ್ಚಾ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್, ಪಕ್ಷದ ಮುಖಂಡ ಎಂ.ಡಿ ಲಕ್ಷ್ಮೀನಾರಾಯಣ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಗೊಲ್ಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.