ಬೆಂಗಳೂರು : ‘ಆಫ್ರಿಕಾದಲ್ಲಿ ಚಿನ್ನ ಗಣಿಗಾರಿಕೆ ಸಂಸ್ಥೆಯಲ್ಲಿ ಶೇ.40ರಷ್ಟು ಪಾಲಿದೆ’ ಎಂದು ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ದಾಖಲೆಯಿದ್ದರೆ ಸಾಬೀತುಪಡಿಸಲಿ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯದ ಮಾಧ್ಯಮ ಪ್ರಕಟಣೆಯಲ್ಲಿ ಹೂಡಿಕೆ ಮತ್ತು ಲೋಕೋಪಯೋಗಿ ಇಲಾಖೆ ಲಂಚ ಪಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಈ.ಡಿ ಅಧಿಕಾರಿಗಳು ನೋಟಿಸ್ ನೀಡಿದರೆ ಸೂಕ್ತ ಉತ್ತರ, ಸ್ಪಷ್ಟಣೆ ನೀಡಲಾಗುವುದು’ ಎಂದು ಹೇಳಿದರು.

ನನ್ನ ವಿರುದ್ಧ ಈ.ಡಿಗೆ ಯಾರು ದೂರು ನೀಡಿದ್ದಾರೆಂಬುದು ಗೊತ್ತಿದೆ. ರಾಜಕೀಯವಾಗಿ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. ಏನೇ ಆದರೂ ಜನರ ತೀರ್ಮಾನವೇ ಅಂತಿಮ. ಜನರೆ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ. ಈಡಿ ಅಧಿಕಾರಿಗಳು ನನಗೆ ನೋಟಿಸ್ ನೀಡಲಿ, ಉತ್ತರ ಕೊಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ನನ್ನ ವಿರುದ್ಧ ದೂರು ನೀಡಿರುವವರು ಯಾರು ಎಂಬ ವಿಚಾರದ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ನಮ್ಮ ಪಕ್ಷದವರು ಅಥವಾ ಬಿಜೆಪಿಯವರೇ ಇರಬಹುದು. ಈ ಕುರಿತು ಸಿಎಂ ಗಮನಹರಿಸಲಿದ್ದಾರೆ. ಏನೇ ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದೇವೆ. ರಾಜಕೀಯದಲ್ಲಿ ಇದೆಲ್ಲವೂ ಸರ್ವೇ ಸಾಮಾನ್ಯ ಎಂದು ಅವರು ನುಡಿದರು.

ಕಾಂಗ್ರೆಸ್‍ನವರೇ ಟಾರ್ಗೆಟ್: ಸಚಿವ ಸತೀಶ್ ಜಾರಕಿಹೊಳಿ ಮೇಲೆ ಈಡಿ ದಾಳಿ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪರಿಶಿಷ್ಟ ಪಂಗಡ(ಎಸ್‍ಟಿ)ದಿಂದ ಬಂದ ಸತೀಶ್ ಅವರು ಅತ್ಯಂತ ದೊಡ್ಡ ಸ್ಥಾನಕ್ಕೆ ಏರಿದ್ದಾರೆ. ಅವರ ಮೇಲೆ ಈಡಿ ದಾಳಿ ಯಾವ ಕಾರಣಕ್ಕಾಗಿ ನಡೆಸಲಾಗಿದೆ ಎಂಬುದು ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಧಾರವಾಡದಲ್ಲಿ ಪ್ರತಿಕಿಯೆ ನೀಡಿದರು.

ರಾಜಕೀಯ ಕ್ಷೇತ್ರದಲ್ಲಿ ಯಾರನ್ನು ಯಾರೂ ಟಾರ್ಗೆಟ್ ಮಾಡುವುದು ಸರಿಯಲ್ಲ. ಆದರೆ, ಈಡಿ ದಾಳಿಯನ್ನು ಗಮನಿಸಿದರೆ ಶೇ.100ರಲ್ಲಿ ಶೇ.90ರಷ್ಟು ಕಾಂಗ್ರೆಸ್ ಪಕ್ಷದವರ ಮೇಲೆಯೇ ದಾಳಿಗಳನ್ನು ನಡೆಸಲಾಗುತ್ತಿದೆ. ಬಿಜೆಪಿ ನಾಯಕರಾದರೆ ಯಾವ ತಪ್ಪೇ ಮಾಡಿಲ್ಲ ಎಂದು ಕ್ಲೀನ್‍ಚೀಟ್ ನೀಡಲಾಗುತ್ತಿದೆ ಎಂದು ಅವರು ದೂರಿದರು.

 

ಹೂಡಿಕೆ ಮಾಡಿದರೆ ತಪ್ಪೇನು: ‘ವಿದೇಶದಲ್ಲಿ ಕಾನೂನು ಬದ್ಧವಾಗಿ ಬಂಡವಾಳ ಹೂಡಿಕೆ ಮಾಡಿದ್ದರೆ ತಪ್ಪೇನು?. ಪ್ರಧಾನಿ ಮೋದಿಯವರೇ ಭಾರತೀಯರು ದೇಶ-ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವಂತಾಗಬೇಕೆಂದು ಕರೆ ನೀಡಿದ್ದಾರೆ. ಅದೇ ರೀತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ವಿದೇಶದಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿರುವುದರಲ್ಲಿ ತಪ್ಪೇನಿದೆ. ಆದರೆ, ಈಡಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಏನೇ ಆರೋಪಗಳಿದ್ದರೂ ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಬೇಕು’

-ಪ್ರಿಯಾಂಕ್ ಖರ್ಗೆ ಗೃಹ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor