×
Ad

ಹಿಂದುಳಿದ ವರ್ಗಗಳ 500 ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಪರೀಕ್ಷಾ ಪೂರ್ವ ತರಬೇತಿ: ಸಚಿವ ಸಂಪುಟ ನಿರ್ಣಯ

Update: 2026-05-21 23:53 IST

ಸಚಿವ ಎಚ್.ಕೆ.ಪಾಟೀಲ್ (File Photo)

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, 10ನೆ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿ ಜಿಲ್ಲೆಗೆ 15 ವಿದ್ಯಾರ್ಥಿಗಳಂತೆ 500 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 15 ಕೋಟಿ ರೂ.ಗಳ ವೆಚ್ಚದಲ್ಲಿ 2 ವರ್ಷಗಳ ವಸತಿ ಸಹಿತ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣದೊಂದಿಗೆ ನೀಟ್, ಜೆಇಇ, ಸಿಇಟಿ ಪರೀಕ್ಷಾ ಪೂರ್ವ ತರಬೇತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು.

ಇತರ ನಿರ್ಣಯಗಳು: ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನ ಉನ್ನತ ಶಿಕ್ಷಣ ನೆರವಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆಯಡಿ ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಾಲದ ಮಾತುಕತೆ ಸಿದ್ಧತೆಯ ಮಾನದಂಡಗಳ ಪ್ರಕಾರ, 53 ಸರಕಾರಿ ಪದವಿ ಕಾಲೇಜುಗಳು, 16 ಸರಕಾರಿ ಪಾಲಿಟೆಕ್ನಿಕ್‍ಗಳು, 5 ಉತ್ಕೃಷ್ಟತಾ ಕೇಂದ್ರಗಳು ಹಾಗೂ ಯೋಜನಾ ನಿರ್ಣಯಗಳ ಘಟಕಗಳಿಗೆ 802 ಕೋಟಿ ರೂ.ಗಳ ವಸ್ತುಗಳನ್ನು ಮುಂಗಡ ಖರೀದಿಗೆ ಅನುಮೋದನೆ ನೀಡಲಾಗಿದೆ.

ಎನ್.ಜಿ.ಇ.ಎಫ್(ಹುಬ್ಬಳ್ಳಿ) ಲಿಮಿಟೆಡ್ ಸಂಸ್ಥೆಗೆ ನೀಡಿದ ದುಡಿಯುವ ಬಂಡವಾಳ ರೂಪದ ಸಾಲ 2 ಕೋಟಿ ರೂ. ಮತ್ತು ಅದರ ಮೇಲಿನ ಬಡ್ಡಿ 4 ಕೋಟಿ ರೂ.ಗಳು ಸೇರಿ 6 ಕೋಟಿ ರೂ.ಗಳು ಹಾಗೂ 10 ಕೋಟಿ ರೂ.ಗಳ ಬಡ್ಡಿ ರಹಿತ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ ಎಂ.ಸಿ.ಎಚ್ ಆಸ್ಪತ್ರೆ ನಿರ್ಮಾಣ ಕಾಮಗಾರಿಗಳನ್ನು 38 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯ ವತಿಯಿಂದ, ಧಾರವಾಡ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಹಾಗೂ ಬೆಳಗಾವಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವಾಗ ಮೃತರಾದ ಅಧಿಕಾರಿ, ಸಿಬ್ಬಂದಿಗಳ 24 ಅವಲಂಬಿತರಿಗೆ ಅನುಕಂಪದ ಆಧಾರದ ನೇಮಕಾತಿ ನೀಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ಹಾಗೂ 37 ಅಭ್ಯರ್ಥಿಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ನಿಯಮಗಳನ್ನು ಸಡಿಲಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿಯನ್ನು ನೀಡಲು ನಿರ್ಧರಿಸಲಾಗಿದೆ.

ಕೋರಮಂಡಲ್ ಶುಗರ್ಸ್ ಲಿಮಿಟೆಡ್ ನವರಿಗೆ ಮಂಜೂರಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸ.ನಂ.119, ಹೊಸ ಸ.ನಂ.151ರಲ್ಲಿನ 100 ಎಕರೆ ಜಮೀನನ್ನು ಶ್ರೀ ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‍ನ ಸಮೂಹ ಕಂಪೆನಿಯಾದ ಹೇಮಗಿರಿ ಶುಗರ್ಸ್ ಮತ್ತು ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‍ಗೆ ಮಾರಾಟಲು ಶರತ್ತುಬದ್ಧ ಅನುಮತಿ ನೀಡಲಾಗಿದೆ.

32 ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಗಳಲ್ಲಿ ಹೊಸ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು 90 ಕೋಟಿ ರೂ.ಗಳ ಮೊತ್ತದಲ್ಲಿ ಖರೀದಿಸಲು ಹಾಗೂ ಕನಕಪುರ ನಗರಸಭೆ ವ್ಯಾಪ್ತಿಯಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಯ ಟ್ರಾಂಚ್-2ರಡಿ 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಲಕತ್ವದಲ್ಲಿರುವ ಹಾಗೂ ಪ್ರಾಧಿಕಾರದ ಬಡಾವಣೆಯಲ್ಲಿರುವ ಉದ್ಯಾನವನ, ಬಯಲು ಜಾಗಕ್ಕೆ ಕಾಯ್ದಿರಿಸಿರುವ ಮೈಸೂರು ಜಿಲ್ಲೆಯ ಸಾತಗಳ್ಳಿ ಗ್ರಾಮದ ಸ.ನಂ.85, 88, 106 ಹಾಗೂ 107ರಲ್ಲಿನ ಕೆರೆ ಜಾಗವನ್ನು ಹೊರತುಪಡಿಸಿ 17.35 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶ್ರೀ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟದ ಹತ್ತಿರ ಕಬಿನಿ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಕಾಮಗಾರಿಯನ್ನು 15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿನ ಬೆಳ್ಳೂರು ಹೋಬಳಿಯ ದಾಸನಕೆರೆ ಅಭಿವೃದ್ಧಿ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳನ್ನು 25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News