×
Ad

ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್

"ಸಿದ್ದರಾಮಯ್ಯ-ಶಿವಕುಮಾರ್ ನಡುವೆ ಮಲ್ಲಿಕಾರ್ಜುನ ಖರ್ಗೆ ಜಗಳ ಮಾಡಿಸುತ್ತಿದ್ದಾರೆ"

Update: 2026-05-21 20:34 IST

ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‍ವಾಲ್ (Photo: facebook/Preetham J Gowda)

ಬೆಂಗಳೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಇಬ್ಬರ ಜಗಳದಲ್ಲಿ ತಾನು ಮುಖ್ಯಮಂತ್ರಿ ಆಗಬಹುದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಜಗಳ ಮಾಡಿಸುತ್ತಿದ್ದಾರೆ’ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‍ವಾಲ್ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರಲ್ಲ, ಮೂರು ಮಂದಿ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದರು.

ನಾಳೆ ವಿಧಾನಸಭೆ ಚುನಾವಣೆ ನಡೆದರೂ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ತುದಿಗಾಲ ಮೇಲೆ ನಿಂತಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗಿದ್ದು, ಆರೇಳು ತಿಂಗಳುಗಳಿಂದ ರಾಜ್ಯದಲ್ಲಿ ಸರಕಾರವೇ ಇಲ್ಲ. ಅಧಿಕಾರಕ್ಕಾಗಿ ಕಚ್ಚಾಟ ಹೆಚ್ಚಾಗಿದೆ ಎಂದು ದೂರಿದರು.

ಬಿಜೆಪಿಯಲ್ಲಿ ಪೂರ್ಣಾವಧಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರಿದ್ದು, ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಧ್ಯಕ್ಷರಾಗಿ ಮುಂದುವರೆಯುವರೇ ಇಲ್ಲವೇ ಎಂಬುದು ಇಲ್ಲಿನ ಸಭೆಯಲ್ಲಿ ನಿರ್ಧಾರ ಆಗುವುದಿಲ್ಲ. ಇಲ್ಲಿ ಅಧ್ಯಕ್ಷರ ಮೌಲ್ಯಮಾಪನ ನಡೆಯುತ್ತದೆ ಎಂಬ ಭ್ರಮೆ ಇದ್ದರೆ ಅದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಪಕ್ಷದಲ್ಲಿ ನಿರಂತರವಾಗಿ ಮೌಲ್ಯಮಾಪನ ನಡೆಯುತ್ತಿರುತ್ತದೆ. ಬಿಜೆಪಿಯ ಯಾವ ನಾಯಕ ಏನು ಮಾಡುತ್ತಿದ್ದಾರೆಂಬುದನ್ನು ತಿಳಿಯಲು ಇಲ್ಲಿ ಬರುವ ಅವಶ್ಯಕತೆ ಇಲ್ಲ. ನಾನು ಅಧ್ಯಕ್ಷರ ಕಾರ್ಯಕರ್ತನಲ್ಲ, ಬಿಜೆಪಿ ಕಾರ್ಯಕರ್ತ. ನಾನೇ ಎಲ್ಲವನ್ನೂ ಹೇಳಬಲ್ಲೆ. ಯಾವಾಗ ಒಬ್ಬ ಅಧ್ಯಕ್ಷನನ್ನು ಪ್ರಕಟಿಸಲಾಗುವುದೋ ಆಗ ಹಳೆಯ ತಂಡದ ಬದಲಾಗಿ ಸಹಜವಾಗಿ ಹೊಸ ತಂಡ ರಚಿಸಲಾಗುತ್ತದೆ. ಹೊಸ ಅಧ್ಯಕ್ಷರು ಬಂದರೆ ಕೋರ್ ಕಮಿಟಿ ಬದಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಾಧ್ಯಕ್ಷರ ನೇತೃತ್ವದಲ್ಲೇ ಚುನಾವಣೆ:

‘ಮೂರನೇ ತಾರೀಕಿಗೆ ಫಾರ್ಮ್ ಭರ್ತಿ ಮಾಡಿ, 5ರಂದು ಸಂದರ್ಶನ ನಡೆಸಿ, 7ರಂದು ಹೆಸರು ಘೋಷಿಸಬೇಕೆನ್ನಲು ಹಾಗೂ ಇಂತಿಷ್ಟು ವೇತನ ನೀಡಬೇಕೆನ್ನಲು ಅಧ್ಯಕ್ಷತೆ ಎಂಬುದು ಒಂದು ಉದ್ಯೋಗವಲ್ಲ’ ಎಂದು ಅವರು, ಇದೀಗ ರಾಜ್ಯದಲ್ಲಿ ಶಕ್ತಿಶಾಲಿ ಅಧ್ಯಕ್ಷರಿದ್ದಾರೆ. ಇದೇ ಅಧ್ಯಕ್ಷರ ನೇತೃತ್ವದಲ್ಲೇ ನಾವು ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News