ಮಂತ್ರಿಗಿರಿಗಾಗಿ ನಿಲ್ಲದ ಆಕ್ರೋಶ: ಮುಂದುವರೆದ ಶಾಸಕರ ಬೆಂಬಲಿಗರ ಪ್ರತಿಭಟನೆ

Update: 2026-08-04 19:53 IST

ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೆಂಬಲಿಗರ ಪ್ರತಿಭಟನೆ

ಬೆಂಗಳೂರು : ಸಂಪುಟ ವಿಸ್ತರಣೆಯ ಎರಡನೇ ದಿನವೂ ಸಚಿವ ಸ್ಥಾನ ವಂಚಿತರು ಹಾಗೂ ಆಕಾಂಕ್ಷಿ ಶಾಸಕರ ಬೆಂಬಲಿಗರು ತಮ್ಮ ಆಕ್ರೋಶವನ್ನು ಮುಂದುವರೆಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಪಕ್ಷದ ವಿರುದ್ಧವೇ ತಮ್ಮ ಹೋರಾಟ ಮುಂದುವರೆದಿದೆ.

ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗವೇ ಶಾಸಕರಾದ ಎನ್.ಎ.ಹಾರೀಸ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ, ಪ್ರಿಯಕೃಷ್ಣ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದಲ್ಲದೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಮುಂದೆಯೂ ತಮ್ಮ ಅಳಲು ತೋಡಿಕೊಂಡರು.

ದಿನೇಶ್ ಗುಂಡೂರಾವ್ ಹಾಗೂ ಎನ್.ಎ.ಹಾರೀಸ್‍ಗೆ ಸಚಿವ ಸ್ಥಾನ ಸಿಗದಿರುವುದರ ವಿರುದ್ಧ ಬೆಂಬಲಿಗರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಹಿರಿಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೂರಾರು ಬೆಂಬಲಿಗರು ಧಿಕ್ಕಾರದ ಘೋಷಣೆ ಕೂಗಿದರು. ಇತ್ತ ಗೋವಿಂದರಾಜನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪರ ಪುತ್ರ ಪ್ರಿಯ ಕೃಷ್ಣಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಅವರ ಬೆಂಬಲಿಗರೂ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಕೆಪಿಸಿಸಿ ಕಚೇರಿಗೆ ಆಗಮಿಸಿದ ಬಿ.ಕೆ. ಹರಿಪ್ರಸಾದ್ ಮುಂದೆ ಬೆಂಬಲಿಗರು ತಮ್ಮ ಬೇಡಿಕೆ ಇಟ್ಟರು. ತಮ್ಮ ನಾಯಕರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು. ಇದೇ ವೇಳೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದ ಬಿ.ಕೆ.ಹರಿಪ್ರಸಾದ್, ‘ಶಾಸಕರಿಗೆ ಆಗಿರುವ ಅನ್ಯಾಯ ಬಗ್ಗೆ ಪಕ್ಷದ ಹಿರಿಯರೊಂದಿಗೆ ಮಾತುಕತೆ ನಡೆಸುವೆ. ಆದರೆ, ಕೆಪಿಸಿಸಿ ಮುಂದೆ ಪ್ರತಿಭಟನೆ ನಡೆಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಇದೇ ವಿಚಾರವಾಗಿ ಸೋಮವಾರ ಮಾಗಡಿ ರಸ್ತೆ ಹಾಗೂ ನಾಗರಭಾವಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಚಿವ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನಗೊಂಡ ಕೃಷ್ಣಪ್ಪ ಹಾಗೂ ಪ್ರಿಯ ಕೃಷ್ಣ ಬೆಂಬಲಿಗರು ಅಜ್ಜಯ್ಯನ ಮಠದ ಶಾಖೆಗೆ ಭೇಟಿ ನೀಡಿದ್ದ ಸಿಎಂ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ನೂರಾರು ಬೆಂಬಲಿಗರು ಪ್ರತಿಭಟಿಸಿದ್ದರು. ಪ್ರತಿಭಟಿಸಿದ್ದವರ ವಿರುದ್ಧ ಮಾಗಡಿ ರಸ್ತೆ, ವಿಜಯನಗರ, ಬ್ಯಾಟರಾಯನಪುರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

‘ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಬಗ್ಗೆ ಕಾರಣ ಹೇಳಬೇಕಿತ್ತು. ನಮ್ಮ ಕಾರ್ಯಕರ್ತರಿಗೆ ನೋವಾಗಿದೆ. ಮೊದಲ ಬಾರಿಗೆ ನಮ್ಮ ಸಮುದಾಯದವರು ಈ ಸಂಪುಟದಲ್ಲಿ ಇಲ್ಲ. ಅದು ಸ್ವಲ್ಪ ಬೇಜಾರಾಗಿದೆ. ನಾವೆಲ್ಲ ಪಕ್ಷದ ನಿಷ್ಠಾವಂತರು, ಪಕ್ಷದ ಕೆಲಸ ಮಾಡಿಕೊಂಡು ಬಂದವರು. ಇದುವರೆಗೂ ಯಾವ ನಾಯಕರೂ ಭೇಟಿ ಮಾಡಿಲ್ಲ. ಮಾತನಾಡಿಲ್ಲ, ಕಾರ್ಯಕರ್ತರಿಗೆ ನೋವಾಗಿದೆ’

-ದಿನೇಶ್ ಗುಂಡೂರಾವ್, ಶಾಸಕ

ಎಂ.ಕೃಷ್ಣಪ್ಪ ಮನವೊಲಿಕೆಗೆ ಯತ್ನ: ‘ಇತ್ತ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಎಂ.ಕೃಷ್ಣಪ್ಪ ಅವರನ್ನು ಮನವೊಲಿಸಲು ಅವರ ನಿವಾಸಕ್ಕೆ ನೂತನ ಸಚಿವರಾದ ಚಲುವರಾಯಸ್ವಾಮಿ ಹಾಗೂ ಎಚ್.ಸಿ.ಬಾಲಕೃಷ್ಣ ಹೋಗಿದ್ದರು. ಆದರೆ ಶಾಸಕ ಕೃಷ್ಣಪ್ಪ ಮನೆಯಲ್ಲಿ ಇಲ್ಲದ ಕಾರಣ ಸಚಿವರು ವಾಪಸ್ ತೆರಳಿದರು.

ಚಿಕ್ಕಬಳ್ಳಾಪುರದಲ್ಲೂ ಪ್ರತಿಭಟನೆ: ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೆ ದ್ರೋಹ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬೆಂಬಲಿಗರು ಅಸಮಾಧಾನ ಹೊರಹಾಕಿ ನಗರದ ಮುಖ್ಯ ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

"ಚಿಕ್ಕಮಗಳೂರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಐದು ಜನ ಗೆದ್ದಿದ್ದೇವೆ. ಇನ್ನೂ ಅವಕಾಶ ಸಿಗುವ ನಿರೀಕ್ಷೆ ಇದೆ. ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಮಹಿಳೆಯರಿಗೆ ಅವಕಾಶ ಸಿಗಬೇಕು. ಮಹಿಳಾ ಮೀಸಲಾತಿ ಪರ ನಾವು ಧ್ವನಿ ಎತ್ತಿದ್ದೆವು" ಎಂದು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

 

ಒಂದೇ ಕ್ಷಣದಲ್ಲಿ ರಾಜೀನಾಮೆ ಅಂಗೀಕರಿಸುತ್ತೇನೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಅಸಮಾಧಾನಿತ ಶಾಸಕರು ಏನಾದರೂ ರಾಜೀನಾಮೆ ನೀಡಲು ಬಂದರೆ ಒಂದೇ ಕ್ಷಣ ಮಾತ್ರದಲ್ಲೇ ರಾಜೀನಾಮೆ ಅಂಗೀಕರಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಮುಖ್ಯ, ಪಕ್ಷದಲ್ಲಿ ಶಿಸ್ತು ಮುಖ್ಯ, ನಾನು ನಿನ್ನೆಯೇ ಹೇಳಿದ್ದೇನೆ. ವೀರೇಂದ್ರ ಪಾಟೀಲ್ ಕಾಲದಲ್ಲಿ ಮಂತ್ರಿ ಸ್ಥಾನ ಕೊಟ್ಟಿರಲಿಲ್ಲ. ಬಂಗಾರಪ್ಪ, ಖರ್ಗೆ, ಧರ್ಮಸಿಂಗ್ ಅವರಿಗೂ ಸಹ ಮಂತ್ರಿ ಸ್ಥಾನ ಕೊಟ್ಟಿರಲಿಲ್ಲ. ನನಗೆ, ಡಾ.ಜಿ.ಪರಮೇಶ್ವರ್ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆಗ ನಾವಿಬ್ಬರು ಸುಮ್ಮನೆ ಇರಲಿಲ್ಲವಾ?. ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದು ಹೇಳಿದರು.

ನಿಗಮ ಮಂಡಳಿಗಳಿಗೆ ನೇಮಕವಾದವರಿಗೆ 2.5 ವರ್ಷ ಅಧಿಕಾರ ಎಂದು ಈ ಹಿಂದೆಯೇ ಹೇಳಿದ್ದೇವೆ. ಅದರಂತೆ ಹೊಸಬರಿಗೆ ಅಲ್ಲಿ ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News