×
Ad

ಕಾಂಗ್ರೆಸ್ ಸರಕಾರದ ಕೈಗೊಂಬೆಯಾದ ರಾಜ್ಯ ಚುನಾವಣಾ ಆಯೋಗ : ಛಲವಾದಿ ನಾರಾಯಣಸ್ವಾಮಿ

Update: 2026-06-25 18:18 IST

ಬೆಂಗಳೂರು : ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ರಾಜ್ಯ ಚುನಾವಣಾ ಆಯೋಗವು, ಬೆಂಗಳೂರು ನಗರದ 27 ವಾರ್ಡ್‍ಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ನಡೆಸುತ್ತಿದ್ದು, ಇದು ಕಾನೂನು ಬಾಹಿರ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ಷೇಪಿಸಿದ್ದಾರೆ.

ಗುರುವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ಎಸ್‍ಐಆರ್ ನಡೆಸುತ್ತಿದೆ. ಆದರೆ ಇದಕ್ಕೆ ಸಮಾನಾಂತರವಾಗಿ ರಾಜ್ಯ ಚುನಾವಣಾ ಆಯೋಗವು ಎಸ್‍ಐಆರ್ ನಡೆಸುತ್ತಿರುವುದು ತಪ್ಪು. ಈ ಬಗ್ಗೆ ಆಯುಕ್ತ ಅನ್ಬುಕುಮಾರ್‌ ಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಅನಧಿಕೃತವಾಗಿ ಎಸ್‍ಐಆರ್ ನಡೆಸುವುದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಒಬ್ಬರ ಹೆಸರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಇದ್ದರೆ ಅದನ್ನು ಎಸ್‍ಐಆರ್‍ನಲ್ಲಿ ತೆಗೆಯಲಾಗುತ್ತದೆ. ಇಲ್ಲಿ ಪಕ್ಷಗಳ ಪ್ರಶ್ನೆ ಬರುವುದಿಲ್ಲ, ವ್ಯಕ್ತಿ ಮುಖ್ಯವಾಗುವುದಿಲ್ಲ. ಒಬ್ಬರ ಹೆಸರು ಒಂದೇ ಕಡೆ ಇರಬೇಕು ಎಂಬುದೇ ಇದರ ಪ್ರಮುಖ ಉದ್ದೇಶ ಎಂದು ಅವರು ವಿವರಿಸಿದರು.

ಕೇಂದ್ರ ಚುನಾವಣಾ ಆಯೋಗವು ಕಾನೂನು ಪ್ರಕಾರ ಎಸ್‍ಐಆರ್ ನಡೆಸುತ್ತಿದೆ. ಆದರೆ ತಮಗೆ ಬೇಕಾದವರ ಹೆಸರು ಉಳಿಸಲು ಹೀಗೆ ಎಸ್‍ಐಆರ್ ನಡೆಸಲಾಗುತ್ತಿದೆ. ಇದು ತಪ್ಪು. ಕೇಂದ್ರ ಚುನಾವಣಾ ಆಯೋಗದ ಅನುಮತಿ ಇಲ್ಲದೆ ಮತ್ತೊಂದು ಎಸ್‍ಐಆರ್ ಅನ್ನು ರಾಜ್ಯ ಚುನಾವಣಾ ಆಯೋಗ ಮಾಡುವಂತಿಲ್ಲ. ಆದರೆ ಇಲ್ಲಿ ಕಾಂಗ್ರೆಸ್ ಸರಕಾರ ಮಾಡಿಸುತ್ತಿದೆ. ತಕ್ಷಣ ಇದನ್ನು ಕೈಬಿಡಬೇಕು ಎಂದು ಅವರು ಹೇಳಿದರು.

ರಾಜ್ಯ ಚುನಾವಣಾ ಆಯೋಗವು ಕೇಂದ್ರ ಆಯೋಗದ ಅಧೀನದಲ್ಲಿ ಕೆಲಸ ಮಾಡಬೇಕು. ರಾಜ್ಯ ಸರಕಾರದ ಅಧೀನದಲ್ಲಿ ಅಲ್ಲ. ಇಂತಹ ಸಮಾನಾಂತರ ಎಸ್‍ಐಆರ್‍ನಿಂದ ಜನರಲ್ಲಿ ಆತಂಕ ಉಂಟಾಗುತ್ತಿದೆ. ಎಸ್‍ಐಆರ್ ವಿರುದ್ಧ ಕಾನೂನು ಕ್ರಮವಾಗಬೇಕು. ನಮ್ಮ ಮನವಿ ಪರಿಗಣಿಸಿದ ಆಯುಕ್ತರು ಕೇಂದ್ರ ಚುನಾವಣಾ ಆಯೋಗಕ್ಕೆ ಮುಂದಿನ ಕ್ರಮಕ್ಕೆ ರವಾನಿಸಲಾಗುವುದು ಎಂದು ಹೇಳಿದ್ದಾರೆ ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News