ಫಾರಂ 7 ದುರ್ಬಳಕೆ ಆರೋಪ | ‘ಕ್ರಮ ಕೈಗೊಳ್ಳುವವರೆಗೆ ಇಲ್ಲಿಂದ ಹೋಗಲ್ಲ’ : ಸಿಎಂ ಡಿ.ಕೆ.ಶಿವಕುಮಾರ್ ಪಟ್ಟು
FIR ದಾಖಲಿಸಲು ಆಗ್ರಹಿಸಿ ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ನೇತೃತ್ವದಲ್ಲಿ ಸಚಿವರ ಧರಣಿ
ಬೆಂಗಳೂರು : ಮತದಾರರ ವಿಶೇಷ ತೀವ್ರ ಪರಿಷ್ಕರಣೆ ‘ಎಸ್‌ಐಆರ್ʼ ಸಂಬಂಧ ಬಿಜೆಪಿ ಕಾರ್ಯಕರ್ತರು ಅಕ್ರಮವಾಗಿ ಫಾರಂ–7 ಸಲ್ಲಿಸುತ್ತಿದ್ದು, ಮುಖ್ಯ ಚುನಾವಣಾಧಿಕಾರಿಯು ಅವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಸಿಎಂ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರಿಗೆ ದೂರು ನೀಡಿರುವ ಅವರು, ‘ಕ್ರಮ ತೆಗೆದುಕೊಳ್ಳುವವರೆಗೂ ಇಲ್ಲಿಂದ ಹೋಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ಅರ್ಜಿಗಳಲ್ಲಿ ಮತದಾರರ ವಿವರಗಳನ್ನು ಪೂರ್ವ ಮುದ್ರಣ ಮಾಡಲಾಗಿದೆ. ಇಷ್ಟೆಲ್ಲಾ ದತ್ತಾಂಶ ಬಿಜೆಪಿಯವರಿಗೆ ಹೇಗೆ ಸಿಕ್ಕಿತು? ಇದಕ್ಕೆಲ್ಲಾ ಹಣ ಒದಗಿಸುತ್ತಿರುವವರು ಯಾರು? ಈ ಕುರಿತು ರಾಜ್ಯದ ವಿವಿಧೆಡೆ ಜನ ಸಾಮಾನ್ಯರೇ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಎಸ್‌ಐಆರ್ ಸಿಬ್ಬಂದಿ ಕ್ರಮ ತೆಗೆದುಕೊಂಡಿಲ್ಲ’ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಫಾರಂ 7 ದುರ್ಬಳಕೆ ಮಾಡಿದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ವಿರುದ್ದ ಎಫ್ ಐ ಆರ್ ದಾಖಲಿಸಲು ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ರದ್ದು ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಡಿ.ಕೆ.ಶಿವಕುಮಾರ್ ಪತ್ರ : ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹಾಗೂ ಫಾರಂ-7 ಸಲ್ಲಿಕೆ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಕೆಲ ಗಂಭೀರ ಆರೋಪ ಮಾಡಿದ್ದಾರೆ. ಸೆ.22, 23, 24ರಂದು ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಲಾಗಿದೆ. ಹೀಗಾಗಿ ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಿದವರ ವಿರುದ್ಧ ತನಿಖೆ ಮಾಡಿ, ಅರ್ಹ ಮತದಾರರ ಹಕ್ಕು ರಕ್ಷಣೆ ಮಾಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.