Screengrab: X/@rishitaakhanna

ಬೆಳಗಾವಿ : ಬೆಳಗಾವಿಯಲ್ಲಿ ಮುಸ್ಲಿಂ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ ಮತ್ತು ಅರ್ಜಿಗಳಿಗೆ ಸಹಿ ಹಾಕುವಂತೆ BLOಗಳಿಗೆ ಒತ್ತಡ ಹೇರಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ thehindu ವರದಿ ಮಾಡಿದೆ.

ಕಳೆದ 15 ವರ್ಷಗಳಿಂದ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 196ರಲ್ಲಿ ಬೂತ್ ಮಟ್ಟದ ಏಜೆಂಟ್ (BLA) ಆಗಿ ಕೆಲಸ ಮಾಡುತ್ತಿದ್ದ ಮೀರ್‌ಸಾಬ್‌ ಸನದಿ ಅವರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ನಾನು ಕಳೆದ ಕನಿಷ್ಠ 15 ವರ್ಷಗಳಿಂದ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 196ರಲ್ಲಿ ಬೂತ್ ಮಟ್ಟದ ಏಜೆಂಟ್ (BLA) ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ, ಕಳೆದ ವಾರ ಶಾಲೆಯಲ್ಲಿ ಕನಿಷ್ಠ 380 ಫಾರ್ಮ್-7 ಅರ್ಜಿಗಳನ್ನು ನೋಡಿ ಆಘಾತಕ್ಕೊಳಗಾದೆ. ಅದರಲ್ಲಿ ನನ್ನ ಹೆಸರು, ನನ್ನ ಸಹೋದರನ ಹೆಸರು, ನಮ್ಮ ಸಂಬಂಧಿಕರು ಹಾಗೂ ನೆರೆಹೊರೆಯವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವಂತೆ ಕೋರಲಾಗಿತ್ತು" ಎಂದು ಬೆಳಗಾವಿಯ 7ನೇ ಕ್ರಾಸ್‌ನ ವೀರಭದ್ರ ಉರ್ದು ಮಾದರಿ ಶಾಲೆಯ BLA ಹಾಗೂ ಶಾಲೆಯ ಚೆಯರ್ ಮ್ಯಾನ್ ಆಗಿರುವ ಮೀರ್‌ಸಾಬ್‌ ಸನದಿ ಹೇಳಿದ್ದಾರೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕನಿಷ್ಠ ಆರು ಮತಗಟ್ಟೆಗಳಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸುವಂತೆ ಕೋರಿ ಈಗಾಗಲೇ ಮುದ್ರಿತ ದೊಡ್ಡ ಪ್ರಮಾಣದ ಫಾರ್ಮ್-7 ಅರ್ಜಿಗಳು ಬೂತ್ ಮಟ್ಟದ ಅಧಿಕಾರಿಗಳಿಗೆ (BLOs) ಸಲ್ಲಿಸಿರುವ ಬಗ್ಗೆ ವರದಿಯಾಗಿದೆ. ಅವುಗಳಲ್ಲಿ ವೀರಭದ್ರ ನಗರದಲ್ಲಿನ ನಾಲ್ಕು ಮತಗಟ್ಟೆಗಳು (ಮತಗಟ್ಟೆ ಸಂಖ್ಯೆ 194, 195, 196 ಮತ್ತು 199) ಹಾಗೂ ಶೆಟ್ಟಿಗಲ್ಲಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ 2 ಮತಗಟ್ಟೆಗಳು ಸೇರಿವೆ( ಮತಗಟ್ಟೆ ಸಂಖ್ಯೆ 209 ಮತ್ತು 210).

ಈ ಮತಗಟ್ಟೆಗಳಲ್ಲಿದ್ದ ಬಿಎಲ್‌ಒಗಳು (BLOs) 'ದಿ ಹಿಂದೂ'ಗೆ ತಿಳಿಸಿದ ಪ್ರಕಾರ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಬಂದಿರುವುದಾಗಿ ಹೇಳಿಕೊಂಡ ಇಬ್ಬರು ವ್ಯಕ್ತಿಗಳು, ಕೇವಲ ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಕೋರಿರುವ 'ಫಾರ್ಮ್-7' ಅರ್ಜಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿ ಮತದಾರರ ಹೆಸರು ಮತ್ತು ಇತರ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗಿತ್ತು; ಆದರೆ ಆಕ್ಷೇಪಣೆ ಸಲ್ಲಿಸುವವರ ಹೆಸರುಗಳನ್ನು ಕೈಬರಹದಲ್ಲಿ ಬರೆಯಲಾಗಿತ್ತು ಅಥವಾ ಆ ಜಾಗವನ್ನು ಖಾಲಿ ಬಿಡಲಾಗಿತ್ತು.

ಆ ವ್ಯಕ್ತಿಗಳು ಅರ್ಜಿಗಳಿಗೆ ಸಹಿ ಹಾಕಿ ತುರ್ತಾಗಿ ಹಿಂದಿರುಗಿಸುವಂತೆ BLOಗಳಿಗೆ ಪದೇಪದೇ ಸೂಚಿಸಿದ್ದರು. ಆದರೆ, BLOಗಳು ಇದಕ್ಕೆ ನಿರಾಕರಿಸಿದ್ದು, ಅರ್ಜಿಗಳಲ್ಲಿ ಹೆಸರುಗಳು ಕಾಣಿಸಿಕೊಂಡಿರುವ ಮತದಾರರು ವರ್ಷಗಳಿಂದ ಈ ಪ್ರದೇಶದಲ್ಲೇ ವಾಸಿಸುತ್ತಿರುವುದು ತಮಗೆ ತಿಳಿದಿದೆ ಎಂದು ಹೇಳಿದ್ದಾರೆ.

BLOಗಳು ನಿರಾಕರಿಸುವುದನ್ನು ಮುಂದುವರಿಸಿದಾಗ, ಆ ವ್ಯಕ್ತಿಗಳು ಚುನಾವಣಾ ನೋಂದಣಿ ಅಧಿಕಾರಿ (ERO) ಉದಯಕುಮಾರ್ ಬಸವಂತಪ್ಪ ತಳವಾರ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದಾರೆ ಮತ್ತು ಆ ವ್ಯಕ್ತಿ ಅರ್ಜಿಗಳಿಗೆ ಸಹಿ ಹಾಕುವಂತೆ BLOಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಊಟ ಮುಗಿಸಿ ಹಿಂದಿರುಗಿದ ಮೀರ್‌ಸಾಬ್‌ ಸನದಿ ಅವರು ತಮ್ಮ ಹೆಸರನ್ನು ಅರ್ಜಿಯಲ್ಲಿ ಕಂಡು ಆ ಇಬ್ಬರು ವ್ಯಕ್ತಿಗಳನ್ನು ಪ್ರಶ್ನಿಸಿದರು. ಈ ವೇಳೆ ಇಂತಹ ಅರ್ಜಿಗಳನ್ನು ವಿವಿಧ ಮತಗಟ್ಟೆಗಳಲ್ಲಿರುವ BLOಗಳಿಗೆ ಕಳುಹಿಸಲಾಗಿದ್ದು, ಅವುಗಳಿಗೆ ತುರ್ತಾಗಿ ಸಹಿ ಹಾಕಬೇಕು ಎಂದು ಅವರಿಗೆ ತಿಳಿಸಲಾಯಿತು. ಬಳಿಕ ಆ ವ್ಯಕ್ತಿಗಳು ಮತ್ತೆ ಫೋನ್‌ನಲ್ಲಿ ಯಾರಿಗೋ ಕರೆ ಮಾಡಿ, ಅವರು ERO ಎಂದು ಬಿಂಬಿಸಿ, ಅರ್ಜಿಗಳಿಗೆ ಸಹಿ ಹಾಕುವಂತೆ BLOಗಳಿಗೆ ಸೂಚಿಸಿದರು ಎಂದು ಸನದಿ ಹೇಳಿದ್ದಾರೆ.

ERO ಸ್ಪಷ್ಟನೆ:

“ಯಾರೋ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ನಾನು ಅಂತಹ ಯಾವುದೇ ಸೂಚನೆಗಳನ್ನು ನೀಡಿಲ್ಲ” ಎಂದು ERO ಉದಯಕುಮಾರ್ ತಳವಾರ್ ತಿಳಿಸಿರುವುದಾಗಿ The Hindu ವರದಿ ಮಾಡಿದೆ.

ಒತ್ತಡದಿಂದಾಗಿ ಸಹಿ ಹಾಕಿದ್ದ ಬಿಎಲ್ಒಗಳು!

ಒತ್ತಡದಿಂದಾಗಿ ಕೆಲವು ಬಿಎಲ್ಒಗಳು ಫಾರ್ಮ್‌ಗಳಿಗೆ ಸಹಿ ಹಾಕಿರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ತಮ್ಮ ಮೇಲಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು (AERO) ಸಂಪರ್ಕಿಸಲು ಪ್ರಯತ್ನಿಸಿದರೂ, ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರಿದಾಗ, BLA ಹಾಗೂ ಮತಗಟ್ಟೆಯಲ್ಲಿದ್ದ ಇತರ ಸ್ಥಳೀಯ ನಿವಾಸಿಗಳು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರಿಂದ ಸಂಪರ್ಕಕ್ಕೆ ಸಿಗಲಿಲ್ಲ.

ಬಳಿಕ ಅವರ ಪುತ್ರ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಅಮಾನ್ ಸೇಠ್ ಅವರನ್ನು ಸಂಪರ್ಕಿಸಿದರು.

ʼದಿ ಹಿಂದೂʼ ಜೊತೆ ಮಾತನಾಡಿದ ಅಮಾನ್ ಸೇಠ್, ನಾವು ಪ್ರಶ್ನಿಸಿದಾಗ ಆ ವ್ಯಕ್ತಿಗಳು ಆರಂಭದಲ್ಲಿ ನಗರ ಪಾಲಿಕೆಯಿಂದ ಬಂದಿರುವುದಾಗಿ ಹೇಳಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ, ಡಾ.ರವಿ ಪಾಟೀಲ್ ಆಸ್ಪತ್ರೆಯಿಂದ ಬಂದಿರುವುದಾಗಿ ಅವರು ಹೇಳಿದ್ದಾಗಿ ತಿಳಿಸಿದ್ದಾರೆ.

ಫಾರ್ಮ್‌ಗಳಲ್ಲಿ ಆಕ್ಷೇಪಣೆದಾರರಾಗಿ ನಮೂದಿಸಲಾಗಿದ್ದ ಕೆಲವರನ್ನು ಸಂಪರ್ಕಿಸಿದಾಗ, ಅರ್ಜಿಗಳಲ್ಲಿರುವ ಹೆಸರುಗಳು ಮತ್ತು ಫೋನ್ ಸಂಖ್ಯೆಗಳು ತಮ್ಮದೇ ಎಂದು ಅವರು ದೃಢಪಡಿಸಿದರು. ಆದರೆ, ಯಾರ ವಿರುದ್ಧವೂ ನಾವು ಈ ಅರ್ಜಿಗಳನ್ನು ಸಲ್ಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಸೇಠ್ ಹೇಳಿದರು.

ಒಂದು ಮತಗಟ್ಟೆಯಲ್ಲಿ ವಿಷಯ ತಕ್ಷಣವೇ ಗಮನಕ್ಕೆ ಬಂದಿದ್ದರಿಂದ ಅಲ್ಲಿನ ನಮೂನೆಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು, ಆದರೆ ಇತರ ಮತಗಟ್ಟೆಗಳಲ್ಲಿ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಉದಾಹರಣೆಗೆ, ಶಶಿಕಾಂತ್ ಜಾಧವ್ ಅವರ ಹೆಸರಿನಲ್ಲಿ ಹಲವಾರು ಫಾರ್ಮ್‌ಗಳನ್ನು ಸಲ್ಲಿಸಲಾಗಿತ್ತು. ಅವರನ್ನು ಸಂಪರ್ಕಿಸಿದಾಗ, ಫಾರ್ಮ್‌ಗಳಲ್ಲಿರುವ EPIC ವಿವರಗಳು ಮತ್ತು ಮೊಬೈಲ್ ಸಂಖ್ಯೆ ತಮ್ಮದೇ ಆಗಿವೆ. ಆದರೆ, ನಾವು ಇಂತಹ ಯಾವುದೇ ಫಾರ್ಮ್‌ಗಳನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.

ಗಡುವು ಮುಗಿದ ಬಳಿಕವೂ ಹೆಸರು ಅಳಿಸುವಂತೆ ಅರ್ಜಿಗಳ ಸಲ್ಲಿಕೆ:

ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸುವಂತೆ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 23ರಂದು ಹಕ್ಕು-ಆಕ್ಷೇಪಣೆಗಳ ಅವಧಿ ಮುಗಿದ ಬಳಿಕವೂ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಮುಂದುವರಿದಿದೆ. ಗಡುವಿಗೂ ಮುನ್ನ ದೊಡ್ಡ ಪ್ರಮಾಣದಲ್ಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿದ್ದವರು, ನಂತರವೂ ಅರ್ಜಿಗಳನ್ನು ಸಲ್ಲಿಸುತ್ತಿರುವುದು ಮುಂದುವರಿದಿದೆ ಎಂದು ವರದಿಯು ತಿಳಿಸಿದೆ.

ಕಾನೂನುಬದ್ಧ ಫಾರ್ಮ್-10 ವರದಿಯ ಪ್ರಕಾರ, ಸೆಪ್ಟೆಂಬರ್ 24ರಿಂದ 29ರವರೆಗೆ ಒಟ್ಟು 1,131 ಅರ್ಜಿಗಳು ಸಲ್ಲಿಕೆಯಾಗಿದೆ. ಹಕ್ಕು-ಆಕ್ಷೇಪಣೆಗಳ ಅವಧಿ ಮುಗಿದ ಬಳಿಕ ಸಲ್ಲಿಸಲಾದ ಅರ್ಜಿಗಳನ್ನು ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರವಷ್ಟೇ ಪರಿಗಣಿಸಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು The Hindu ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor