22,400 ಕೋಟಿ ರೂ. ಬರ ಪರಿಹಾರಕ್ಕೆ ಪ್ರಧಾನಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ
ಬೆಂಗಳೂರು : ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸುಮಾರು 58 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿದ್ದು, ಅಂದಾಜು 62,482 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ನಗರದ ಐಐಎಂ ಬೆಂಗಳೂರು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ ಅವರು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ ಅಡಿಯಲ್ಲಿ ರಾಜ್ಯವು 22,400.58 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿದೆ ಎಂದು ಹೇಳಿದರು.
ಕರ್ನಾಟಕವು ಕಳೆದ 70 ವರ್ಷಗಳಲ್ಲೇ ಎರಡನೇ ಅತಿ ಕಡಿಮೆ ಮಳೆಯನ್ನು ದಾಖಲಿಸಿದ್ದು, ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆದುದರಿಂದ, ರೈತರ ನೆರವಿಗಾಗಿ ಈ ಪರಿಹಾರವನ್ನು ಶೀಘ್ರವಾಗಿ ಅನುಮೋದಿಸಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕೋರಿದರು.
ಕಬ್ಬು ಬೆಳೆಗಾರರ ಬೇಡಿಕೆಗಳ ಪ್ರಸ್ತಾವ :
ರಾಜ್ಯದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಪ್ರಧಾನಮಂತ್ರಿಯ ಗಮನಕ್ಕೆ ತಂದ ಶಿವಕುಮಾರ್, 2026-27ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) 3,650 ರೂ. ಆಗಿದ್ದು, ರೈತರು ಪ್ರತಿ ಟನ್ಗೆ 5,500 ರೂ. ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
2019ರಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ ಪ್ರತಿ ಕೆ.ಜಿ.ಗೆ 31 ರೂ. ಗಳಲ್ಲೆ ಸ್ಥಿರವಾಗಿದೆ. ಕರ್ನಾಟಕಕ್ಕೆ ಎಥೆನಾಲ್ ಹಂಚಿಕೆಯಲ್ಲೂ ನ್ಯಾಯಯುತ ಪಾಲು ನೀಡಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು.