ಮೈಸೂರು : ಮೇಕೆದಾಟು ಜಲಾಶಯ ಯೋಜನೆಗೆ ಅಗತ್ಯ ಅನುಮತಿ ನೀಡಬೇಕು, ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿಂಪಡೆಯಬೇಕು ಹಾಗೂ ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಸಿಎಸ್‌ಆರ್ ನಿಧಿಯನ್ನು ರಾಜ್ಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ರಾಜ್ಯಕ್ಕೆ ಸಂಬಂಧಿಸಿದ ಮೂರು ಪ್ರಮುಖ ಬೇಡಿಕೆಗಳನ್ನು ಮತ್ತೊಮ್ಮೆ ಮಂಡಿಸಿದರು.

ಮೈಸೂರಿನಲ್ಲಿ ಶುಕ್ರವಾರ ನಡೆದ ಕಾಸ್ಮೋಸ್–ಮೈಸೂರು ತಾರಾಲಯ ಹಾಗೂ ಭಾರತ ವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಹಾಗೂ ಸವಾಲುಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರಧಾನಿಯವರ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವು ಈಡೇರುವ ಭರವಸೆ ಇದೆ ಎಂದು ಹೇಳಿದರು.

ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಕರ್ನಾಟಕದ ಪರವಾಗಿ ತೀರ್ಪು ನೀಡಿದ್ದು, ಕಾನೂನಾತ್ಮಕವಾಗಿ ಈ ವಿಚಾರ ಇತ್ಯರ್ಥಗೊಂಡಿದೆ. ಹೀಗಾಗಿ ಕುಡಿಯುವ ನೀರಿನ ಮಹತ್ವದ ಯೋಜನೆಗೆ ವಿಳಂಬ ಮಾಡದೆ ಕೇಂದ್ರ ಸರ್ಕಾರ ಅಂತಿಮ ಶಾಸನಬದ್ಧ ಅನುಮತಿಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಕಸ್ತೂರಿರಂಗನ್ ವರದಿಯ ಶಿಫಾರಸುಗಳಿಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ವಿಧಾನಮಂಡಲವು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. ಈ ಸಂಬಂಧ ತೊಂದರೆಗೆ ಒಳಗಾಗುವ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ಸಾರ್ವಜನಿಕರೊಂದಿಗೆ ವ್ಯಾಪಕ ಚರ್ಚೆ ನಡೆಸಲಾಗಿದೆ. ಅಲ್ಲಿನ ಜನರ ಭಾವನೆ ಹಾಗೂ ಬದುಕಿನ ವಾಸ್ತವಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಸ್ಥಳೀಯ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಕಾರಣದಿಂದ ಪೋಷಕರು ಮಕ್ಕಳನ್ನು ಓದಿಸಲು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದ ಉದ್ದೇಶದಿಂದ ನಡೆಯುತ್ತಿರುವ ಆರ್ಥಿಕ ವಲಸೆಯಿಂದ ಅಸಮತೋಲನ ಉಂಟಾಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಡೆಯುತ್ತಿರುವ ವಲಸೆಯ ಪ್ರಮಾಣವು 2002ರಲ್ಲಿ ಶೇ.31ರಷ್ಟಿದ್ದರೆ, 2026ರಲ್ಲಿ ಶೇ.47ಕ್ಕೆ ಏರಿಕೆಯಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ಎರಡು ದಶಕಗಳಲ್ಲಿ ಈ ಪ್ರಮಾಣ ಶೇ.70ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದರು.

ನಗರ ಪ್ರದೇಶಗಳಿಗೆ ವಲಸೆ ತಡೆಗಟ್ಟಲು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲು ಕರ್ನಾಟಕ ಸರ್ಕಾರದ ಸಿಎಸ್‌ಆರ್ ನೀತಿಯನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಿಎಸ್‌ಆರ್ ಯೋಜನೆಗಳನ್ನು ಕರ್ನಾಟಕದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅನುಷ್ಠಾನಗೊಳಿಸುವಂತೆ ಸಲಹಾ ಸೂಚನೆಗಳನ್ನು ಹೊರಡಿಸಬೇಕು ಎಂದು ಮನವಿ ಮಾಡಿದರು.

ಸಿಎಸ್‌ಆರ್ ನೀತಿಯ ಮೂಲಕ ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕಾಸ್ಮೋಸ್ ಕೇಂದ್ರ ರಾಜ್ಯದ ಹೆಮ್ಮೆಯಾಗಲಿದೆ :

ಪರಂಪರೆ, ಜ್ಞಾನ ಮತ್ತು ಸಂಸ್ಕೃತಿಗೆ ಹೆಸರಾದ ಮೈಸೂರಿಗೆ ಕಾಸ್ಮೋಸ್ ಕೇಂದ್ರ ಮತ್ತೊಂದು ಮಹತ್ವದ ವೈಜ್ಞಾನಿಕ ಹೆಗ್ಗುರುತಾಗಲಿದೆ. ಇದು ರಾಜ್ಯದ ಹೆಮ್ಮೆಯ ಕೇಂದ್ರವಾಗಿಯೂ ಹೊರಹೊಮ್ಮಲಿದೆ. ಈ ಯೋಜನೆಯನ್ನು ಮೈಸೂರಿಗೆ ತರಲು ನೆರವಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಕರ್ನಾಟಕ ವಿಜ್ಞಾನದ ಹೆಗ್ಗುರುತು ಹೊಂದಿರುವ ರಾಜ್ಯ :

ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳ ಇತಿಹಾಸದಲ್ಲಿ ಕರ್ನಾಟಕದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಭಾರತದ ಮೊದಲ ಉಪಗ್ರಹ ಆರ್ಯಭಟದಿಂದ ಹಿಡಿದು ಚಂದ್ರಯಾನ, ಆದಿತ್ಯ ಎಲ್-1 ಮತ್ತು ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯವರೆಗೆ ಕರ್ನಾಟಕದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬೆಂಗಳೂರು ಭಾರತದ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ. ಯು.ಆರ್.ಎಸ್.ಸಿ. ಮತ್ತು ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ (ISTRAC) ನಂತಹ ಪ್ರಮುಖ ಸಂಸ್ಥೆಗಳು ದೇಶದ ಮಹತ್ವದ ಬಾಹ್ಯಾಕಾಶ ಯೋಜನೆಗಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಕರ್ನಾಟಕ ಸರ್ಕಾರವು ಶಿವಮೊಗ್ಗ, ರಾಯಚೂರು, ಯಾದಗಿರಿ ಮತ್ತು ಚಿಕ್ಕಮಗಳೂರಿನಲ್ಲಿ ಒಟ್ಟು ಸುಮಾರು 59 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಶಿವಮೊಗ್ಗ ವಿಜ್ಞಾನ ಕೇಂದ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಾಯಚೂರಿನ ಕೇಂದ್ರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಯಾದಗಿರಿ ಮತ್ತು ಚಿಕ್ಕಮಗಳೂರಿನಲ್ಲಿಯೂ ವಿಜ್ಞಾನ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಬೆಂಗಳೂರು ಸೈನ್ಸ್ ಸಿಟಿಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿಯಲ್ಲಿ 230 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಬೆಂಗಳೂರು, ಮಂಗಳೂರು ಮತ್ತು ಗದಗದಲ್ಲಿ ಈಗಾಗಲೇ ತಾರಾಲಯಗಳು ಕಾರ್ಯನಿರ್ವಹಿಸುತ್ತಿವೆ. ಚಿತ್ತಾಪುರದಲ್ಲಿ ತಾರಾಲಯ ಉದ್ಘಾಟನೆಗೆ ಸಿದ್ಧವಾಗಿದೆ ಎಂದರು.

ರಾಜ್ಯದ ವಿವಿಧ ಭಾಗಗಳಲ್ಲಿ ತಾರಾಲಯಗಳ ನಿರ್ಮಾಣ :

ಧಾರವಾಡ, ಮಡಿಕೇರಿ, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿಯೂ ತಾರಾಲಯಗಳು ನಿರ್ಮಾಣವಾಗುತ್ತಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಇನ್ನಷ್ಟು ಪ್ರದೇಶಗಳಿಗೆ ಇಂತಹ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೂ ಅತ್ಯಾಧುನಿಕ ಸೌಲಭ್ಯಗಳ ಅನುಭವ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಕಾಸ್ಮೋಸ್ ಮಾದರಿಯ ವಿಜ್ಞಾನ ಮತ್ತು ತಾರಾಲಯ ಸೌಲಭ್ಯವನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೂಚಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಮೊಬೈಲ್ ಡಿಜಿಟಲ್ ತಾರಾಲಯ ಯೋಜನೆಯ ಮೂಲಕ ಈಗಾಗಲೇ 19.21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲೆಗಳಲ್ಲಿಯೇ ಕುಳಿತು ಬಾಹ್ಯಾಕಾಶದ ವಿಸ್ಮಯಗಳನ್ನು ವೀಕ್ಷಿಸಿದ್ದಾರೆ. 833 ಕೆಆರ್‌ಇಐಎಸ್ ಶಾಲೆಗಳು ಮತ್ತು ಕಾಲೇಜುಗಳಿಗೆ ದೂರದರ್ಶಕಗಳನ್ನು ವಿತರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಗ್ರಹಗಳು, ನಕ್ಷತ್ರಗಳು ಮತ್ತು ಆಕಾಶಕಾಯಗಳನ್ನು ಸ್ವತಃ ವೀಕ್ಷಿಸಿ ಅಧ್ಯಯನ ಮಾಡಲು ಸಾಧ್ಯವಾಗಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಮತ್ತು ಜವಾಹರಲಾಲ್ ನೆಹರು ತಾರಾಲಯದ ಸಹಯೋಗದಲ್ಲಿ ವಿಜ್ಞಾನ ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-30ರ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವುದು, ಸಂಶೋಧನೆಯನ್ನು ಬಲಪಡಿಸುವುದು, ನುರಿತ ಮಾನವ ಸಂಪನ್ಮೂಲ ಸೃಷ್ಟಿಸುವುದು ಹಾಗೂ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಂಪರ್ಕ ಬೆಸೆಯುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು ಮತ್ತು ವಾಣಿಜ್ಯ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶದಿಂದ ಭಾರತದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವನ್ನು ಕರ್ನಾಟಕ ಸ್ಥಾಪಿಸಿದೆ ಎಂದರು.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯು ಖಗೋಳ ವಿಜ್ಞಾನ ಮತ್ತು ಸೌರ ವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ಆದಿತ್ಯ ಎಲ್-1 ಯೋಜನೆಗೆ ಪ್ರಮುಖ ಪೇಲೋಡ್ ಅಭಿವೃದ್ಧಿಪಡಿಸುವಲ್ಲಿಯೂ ಕೊಡುಗೆ ನೀಡಿದೆ. ಬಾಹ್ಯಾಕಾಶ ವಿಜ್ಞಾನದ ಹೊಸ ಆಯಾಮಗಳ ಅಧ್ಯಯನದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನಿಯವರ ಆಶಯದಂತೆ ಮಿಯಾವಾಕಿ ಪದ್ಧತಿಯಲ್ಲಿ ಅಭಿವೃದ್ಧಿಪಡಿಸಿರುವ ಭಾರತ ವನವು ಮೈಸೂರನ್ನು ಹಸಿರುಮಯ, ಆರೋಗ್ಯಕರ ಮತ್ತು ಸುಸ್ಥಿರ ನಗರವನ್ನಾಗಿ ರೂಪಿಸಲು ಕೊಡುಗೆ ನೀಡಲಿದೆ. ಭಾರತ ವನವು ಭೂಮಿಯ ಭವಿಷ್ಯವನ್ನು ಪೋಷಿಸಿದರೆ, ನಮ್ಮ ಯುವ ಪೀಳಿಗೆಯ ಜ್ಞಾನ ಮತ್ತು ಆಲೋಚನೆಗಳ ಭವಿಷ್ಯವನ್ನು ತಾರಾಲಯ ರೂಪಿಸಲಿದೆ. ಮರಗಿಡಗಳು ಮನುಷ್ಯನನ್ನು ಪ್ರಕೃತಿಯೊಂದಿಗೆ ಬೆಸೆಯುತ್ತವೆ. ತಾರಾಲಯವು ನಮ್ಮ ಕಲ್ಪನೆ ಮತ್ತು ಚಿಂತನೆಗಳನ್ನು ಬೆಳೆಸುತ್ತದೆ ಎಂದು ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗಬೇಕಾದರೆ ಹಸಿರುಮಯ ಭೂಮಿಯೂ ಬೇಕು, ವೈಜ್ಞಾನಿಕ ಚಿಂತನೆಗಳಿಂದ ಕೂಡಿದ ಯುವ ಪೀಳಿಗೆಯೂ ಬೇಕು. ಈ ಎರಡರ ನಡುವೆ ಸಮನ್ವಯ ಸಾಧಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor