×
Ad

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ: ಸಿದ್ದರಾಮಯ್ಯ ವಿದಾಯ ಭಾಷಣ

ಸುದ್ದಿ ಗೋಷ್ಠಿಯಲ್ಲಿ ಭಾವುಕರಾದ ಸಿಎಂ ಸಿದ್ದರಾಮಯ್ಯ

Update: 2026-05-28 15:46 IST

ಬೆಂಗಳೂರು, ಮೇ 28: ಎಂದೂ ಅಧಿಕಾರ ಮತ್ತು ಆಸ್ತಿ ಮಾಡಿಕೊಳ್ಳಲು ಹೋದ ವ್ಯಕ್ತಿ ನಾನಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. 

ಲೋಕಭವನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾವುಕರಾದರು.

"ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಮೊದಲಿನಿಂದಲೂ ಹೇಳಿದ್ದೆ. ಅದರಂತೆ ರಾಜೀನಾಮೆ ನೀಡಿದ್ದೇನೆ. ರಾಜ್ಯಪಾಲರು ಊರಿನಲ್ಲಿ ಇಲ್ಲ. ಆದ್ದರಿಂದ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗೆ ನೀಡಿದ್ದೇನೆ. ರಾಜ್ಯಪಾಲರು ಬಂದ ಬಳಿಕ ರಾಜೀನಾಮೆ ಪತ್ರ ಅಂಗೀಕರಿಸುತ್ತಾರೆ ಎಂಬ ವಿಶ್ವಾಸ ಇದೆ” ಎಂದರು.

“ಮುಂದಿನ ಮುಖ್ಯಮಂತ್ರಿ ಅವರಿಗೆ ಅವಕಾಶ ಮಾಡಿಕೊಡುವುದು ರಾಜ್ಯಪಾಲರ ಜವಾಬ್ದಾರಿ. ನಮ್ಮ ಪಕ್ಷ 135 ಸ್ಥಾನಗಳನ್ನು ಗೆದ್ದಿದೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ. ನಮಗೆ ಸಂಪೂರ್ಣ ಬಹುಮತವಿದೆ” ಎಂದು ಹೇಳಿದರು.

ತಮ್ಮ ರಾಜಕೀಯ ಜೀವನವನ್ನು ಸ್ಮರಿಸಿದ ಸಿದ್ದರಾಮಯ್ಯ, “ಸಂವಿಧಾನ ನಮ್ಮ ಪರಮ ಧ್ಯೇಯ. ಮತದಾರರೇ ನಮ್ಮ ಅಭಿಮಾನಿ ದೇವರುಗಳು. ನಾಡಿನ ಏಳು ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು” ಎಂದರು.

“ಒಂದು ಬಾರಿ ಪ್ರತಿಪಕ್ಷ ನಾಯಕನಾಗಲು ಅವಕಾಶ ನೀಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳು” ಎಂದು ಹೇಳಿದರು.

“2006ರಲ್ಲಿ ಕಾಂಗ್ರೆಸ್ ಸೇರಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು ಹಾಗೂ ಸಂಸದರು ಅಪಾರ ಪ್ರೀತಿ ತೋರಿಸಿದ್ದಾರೆ. ಅವರಿಗೆ ನಾನು ಚಿರಋಣಿ” ಎಂದರು.

“2013ರಿಂದ 2018 ಹಾಗೂ 2023ರಿಂದ 2026ರವರೆಗೆ ನನ್ನೊಂದಿಗೆ ಕೆಲಸ ಮಾಡಿದ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳು” ಎಂದು ಹೇಳಿದರು.

ಈ ವೇಳೆ ಭಾವುಕರಾದ ಸಿದ್ದರಾಮಯ್ಯ, “ನಾನು ಹಳ್ಳಿಯಿಂದ ಬಂದ ವ್ಯಕ್ತಿ. ಶಾಸಕ, ಸಚಿವ, ಮುಖ್ಯಮಂತ್ರಿ ಆಗುವ ಕನಸನ್ನೂ ಕಂಡಿರಲಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಮ್ಮ ಕುಟುಂಬದಲ್ಲಿ ಯಾರೂ ರಾಜಕಾರಣದಲ್ಲಿ ಇರಲಿಲ್ಲ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News