ಬೆಂಗಳೂರು : ಗಂಭೀರ ಅಪರಾಧ ಪ್ರಕರಣ ಆರೋಪದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಜೈಲಿಗೆ ಹೋಗುವುದನ್ನು ಸ್ವತಃ ಕಾಂಗ್ರೆಸ್ ನಾಯಕರೇ ತಡೆದರು ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಆಗ ನಾನು ಕಾನೂನು ಖಾತೆಯ ಸಚಿವನಾಗಿದ್ದೇ.ಇದೇ ವೇಳೆ ಇಂದಿನ ಕೇಂದ್ರದ ಗೃಹ ಸಚಿವ ಆಗಿರುವ ಅಮಿತ್ ಶಾ ಗಡಿಪಾರು ಆಗಿದ್ದ .ಜತೆಗೆ, ಬೇರೆ ರಾಜ್ಯದಲ್ಲಿ ಈತನ ಮೇಲಿರುವ ಪ್ರಕರಣ ವಿಚಾರಣೆ ನಡೆಸಲು ಕೋರ್ಟ್ ಆದೇಶ ನೀಡಿತ್ತು. ಅದರೊಂದಿಗೆ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಜೈಲಿಗೆ ಹೋಗಿ, ಗಡಿಪಾರು ಆಗಬೇಕಿತ್ತು. ಆಗ ಸ್ವತಃ ಕಾಂಗ್ರೆಸ್ ನಾಯಕರೇ ತಡೆದರು ಎಂದು ತಿಳಿಸಿದರು.

ನಾವು ಅಂದು ಮಾಡಿದ ಒಂದು ತಪ್ಪಿನಿಂದ ಈಗ ಅನುಭವಿಸುವ ಪರಿಸ್ಥಿತಿ ಬಂದಿದೆ. ರಾಜಕಾರಣದಲ್ಲಿ ಎಂದೂ ಶತ್ರುಗಳನ್ನು ಬಿಡಬಾರದು ಎನ್ನುವುದಕ್ಕೆ ಇದೊಂದು ಪಾಠವೇ ಆಗಿದೆ. ಈ ಘಟನೆ ದುರಂತ ನಾನು ಪದೇ ಪದೇ ಹೇಳುತ್ತೇನೆ. ಆದರೆ, ನರೇಂದ್ರ ಮೋದಿ ಜೈಲಿಗೆ ಹೋವುದನ್ನು ತಪ್ಪಿಸುವಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಇರಲಿಲ್ಲ. ಇದನ್ನು ಕೆಲಸ ಕಾಂಗ್ರೆಸ್ಸಿಗರೇ ಮಾಡಿದರು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳನ್ನು ಅಧಿಕಾರಕ್ಕೆ ಬರುವ ಸರಕಾರ ಯಾವುದೇ ಅಡೆತಡೆಗಳು ಇಲ್ಲದೆ ಜಾರಿಗೆ ತರಬೇಕು.ಆಗ ಮಾತ್ರ ಪಕ್ಷ ಸದಾ ಉಳಿಯಲಿದ್ದು, ಜನರಲ್ಲೂ ವಿಶ್ವಾಸ ಮೂಡಲಿದೆ ಎಂದ ಅವರು, ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಝಾನ್ಸಿ ರಾಣಿ, ಕಿತ್ತೂರು ರಾಣಿ ಚೆನ್ನಮ್ಮಾ ಅವರಂತೆ ಮಾದರಿಯಾಗಿದ್ದಾರೆ ಎಂದು ವೀರಪ್ಪ ಮೊಯ್ಲಿ ಬಣ್ಣಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ 371(ಎ) ಸಾಂವಿಧಾನಿಕ ತಿದ್ದುಪಡಿಯೊಂದಿಗೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರ ಬೆಂಬಲ ಮಹತ್ವದ್ದು. ಅವರ ತ್ಯಾಗ, ಸಹನೆ, ಸಂಘಟನಾ ಸಾಮಥ್ರ್ಯ, ರಾಷ್ಟ್ರಪ್ರೇಮ ದೂರದರ್ಶಿತ್ವ ಹಾಗೂ ನಾಯಕತ್ವದ ಗುಣಗಳು ಇಂದಿನ ಯುವಜನತೆ ಮತ್ತು ರಾಜಕೀಯ ಕಾರ್ಯಕರ್ತರಿಗೆ ಮಾದರಿಯಾಗಿವೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ನಂತರ ದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದ ಸಂದರ್ಭದಲ್ಲಿ ವೈಯಕ್ತಿಕ ನೋವು ಹಾಗೂ ಕುಟುಂಬದ ಜವಾಬ್ದಾರಿಗಳ ನಡುವೆಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಒತ್ತಾಯದ ಮೇರೆಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಸಂಘಟನೆಯನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರ ಧೈರ್ಯ ಮತ್ತು ಬದ್ಧತೆ ಶ್ಲಾಘನೀಯ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಮೀರ್ ದಳಸನೂರು\ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಸಮೀರ್ ದಳಸನೂರು ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿದ್ದು, ದೂರದರ್ಶನದ ಚಂದನ ವಾಹಿನಿಯಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ, ಆಕಾಶವಾಣಿಯಲ್ಲೂ ಅರೆಕಾಲಿಕ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಪ್ರಸ್ತುತ ಹಲವು ವರ್ಷಗಳಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.