ಬೆಂಗಳೂರು ನಗರದಲ್ಲಿ ‘ರೌಡಿ ನಿಗ್ರಹ ಪಡೆ’ ರಚನೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸವನ್ನು ನಿಯಂತ್ರಣ ಮಾಡಲು ಪ್ರತ್ಯೇಕ ‘ರೌಡಿ ನಿಗ್ರಹ ಪಡೆ’ ರಚನೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿಗಳ ಮೇಲೆ ಸ್ಥಳೀಯ ಪೊಲೀಸ್ ಠಾಣೆಯ ನಿಯಂತ್ರಣವನ್ನು ತಪ್ಪಿಸಿ, ಅದನ್ನು ನೇರವಾಗಿ ಕಮೀಷನರೇಟ್ ಅವರಿಗೆ ಒಪ್ಪಿಸುತ್ತೇವೆ. ರೌಡಿ ಚಟುವಟಿಕೆಗಳನ್ನು ಈ ನಿಗ್ರಹ ಪಡೆಯೇ ಮಟ್ಟ ಹಾಕುತ್ತದೆ ಎಂದು ಹೇಳಿದರು.
ರೌಡಿಗಳು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ದಾಳಿ ನಡೆಯುವ ಮುನ್ನವೆ ರೌಡಿಗಳಿಗೆ ಮಾಹಿತಿ ಕೊಡುವುದು, ರಕ್ಷಣೆ ನೀಡುವುದು ನಡೆಯುತ್ತದೆ. ಸರಕಾರಕ್ಕೆ ಈ ಎಲ್ಲದರ ಬಗ್ಗೆ ಮಾಹಿತಿ ಇದೆ. ಆದುದರಿಂದಲೆ, ಇಂತಹ ಯಾವುದೆ ಹೊಂದಾಣಿಕೆಗೆ ಅವಕಾಶ ಕೊಡದಂತೆ ಪ್ರತ್ಯೇಕ ಪಡೆಯನ್ನು ರಚನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳು ಮತ್ತು ಡ್ರಗ್ಸ್ ಜಾಲವನ್ನು ಮಟ್ಟಹಾಕಲು ರಚನೆಯಾಗುವ ಈ ಪ್ರತ್ಯೇಕ ರೌಡಿ ನಿಗ್ರಹ ಪಡೆಯು, ಸ್ಥಳೀಯ ಪೊಲೀಸ್ ಠಾಣೆಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಕಮಿಷನರೇಟ್ ನಿಯಂತ್ರಣದಲ್ಲಿ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ಸಣ್ಣ ಅಪರಾಧ ಘಟನೆಗೂ ಅವಕಾಶ ಕೊಡಬಾರದು, ಭಯ ಮುಕ್ತ ಬೆಂಗಳೂರು ನಿರ್ಮಾಣ ನಮ್ಮ ಗುರಿ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸರಕಾರ ಈಗಾಗಲೆ ಯೋಜನೆ ರೂಪಿಸಿದೆ. ನಮ್ಮ ಪೊಲೀಸ್ ಅಧಿಕಾರಿಗಳು ಹಲವೆಡೆ ದಾಳಿ ಮಾಡಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಮುಂದೆಯೂ ದೊಡ್ಡ ಮಟ್ಟದ ಶೋಧ ಕಾರ್ಯಗಳು ನಡೆಯಲಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಗರ ನಿವಾಸಿಗಳ ವಿವರ ಸಂಗ್ರಹ: ಬೆಂಗಳೂರು ನಗರದಲ್ಲಿ ವಾಸಿಸುವ ಜನರ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಮನೆಗಳಲ್ಲಿರುವ ನಿವಾಸಿಗಳ ವಿವರಗಳನ್ನು ಸಂಗ್ರಹಿಸುವ ಅಗತ್ಯವಿದೆ. ಬೆಂಗಳೂರಿನಲ್ಲಿ 51 ಲಕ್ಷ ಇದ್ದ ಮತದಾರರ ಸಂಖ್ಯೆ, ಈಗ 45 ಲಕ್ಷಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಯಾರು ಎಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಯಲ್ಲೂ ಲಭ್ಯವಿರುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.