ಬ್ರಹ್ಮಾವರ | ಮಾಬುಕಳ ಸೀತಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ
ಕೋಟ: ಪತಿ ಹಾಗೂ ಪತ್ನಿ ಕೈಗಳನ್ನು ಚೂಡಿದಾರದ ಶಾಲಿನಿಂದ ಪರಸ್ಪರ ಕಟ್ಟಿಕೊಂಡು ಮಾಬುಕಳದ ಸೀತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಸೇತುವೆಯಲ್ಲಿ ನಡೆದಿದೆ.
ಮೃತರನ್ನು ಮೂಲತಃ ತುಮಕೂರು ಜಿಲ್ಲೆಯವರಾದ ಶ್ರೀನಿವಾಸ್ ಮೂರ್ತಿ ಎಚ್. (52) ಹಾಗೂ ಅವರ ಪತ್ನಿ ಗಂಗಾ (48) ಎಂದು ಗುರುತಿಸಲಾಗಿದೆ.
ದಂಪತಿ ಒಂದು ವಾರದ ಹಿಂದೆ ಕರಾವಳಿ ಹಾಗೂ ಮಲೆನಾಡು ಭಾಗದ ವಿವಿಧ ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಬಂದಿದ್ದರೆನ್ನಲಾಗಿದೆ. ಶನಿವಾರ ಮುರ್ಡೇಶ್ವರಕ್ಕೆ ಭೇಟಿ ನೀಡಿದ್ದ ಅವರು, ಬಳಿಕ ಸಂಜೆ ವೇಳೆಗೆ ಮಾಬುಕಳ ಪರಿಸರದಲ್ಲಿ ಸುತ್ತಾಡುತ್ತಿದ್ದರು. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮಾಬುಕಳ ಸೇತುವೆಯಿಂದ ಸೀತಾ ನದಿಗೆ ಹಾರಿದ್ದರೆನ್ನಲಾಗಿದೆ.
ದಂಪತಿ ನದಿಗೆ ಹಾರಿದ್ದನ್ನು ಗಮನಿಸಿದ ರಿಕ್ಷಾ ಚಾಲಕರೊಬ್ಬರು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಶೀಲಿಸುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ ವೇಳೆ ಶೋಧ ಕಾರ್ಯಾಚರಣೆ ನಡೆಸಿದರೂ ದಂಪತಿಯ ಪತ್ತೆಯಾಗಿರಲಿಲ್ಲ.
ರವಿವಾರ ಬೆಳಗ್ಗೆ ಮಾಬುಕಳ ಸೇತುವೆಯಿಂದ ಸುಮಾರು 500 ಮೀಟರ್ ದೂರದ ಪಾಂಡೇಶ್ವರದ ಸೀತಾ ನದಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಆತ್ಮಹತ್ಯೆಗೂ ಮುನ್ನ ದಂಪತಿ ಚೂಡಿದಾರದ ಶಾಲಿನಿಂದ ತಮ್ಮ ಕೈಗಳನ್ನು ಪರಸ್ಪರ ಕಟ್ಟಿಕೊಂಡಿದ್ದರು ಎನ್ನಲಾಗಿದ್ದು ಅದೇ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹಗಳನ್ನು ಕೋಟದ ಜೀವನ್ಮಿತ್ರ ನಾಗರಾಜ್ ಪುತ್ರನ್ ಹಾಗೂ ಆಂಬುಲೆನ್ಸ್ ಚಾಲಕ ಕಿಶೋರ್ ಶೆಟ್ಟಿ ಅವರು ಕುಂದಾಪುರದ ಶವಾಗಾರಕ್ಕೆ ಸಾಗಿಸಲು ನೆರವಾದರು.
ಮೃತರ ಕುಟುಂಬಿಕರಿಗೆ ಮಾಹಿತಿ ರವಾನಿಸಲಾಗಿದೆ.
ಸ್ಥಳಕ್ಕೆ ಕೋಟ ಠಾಣಾ ಉಪ ನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.