ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ, ಅವಧಿ ಪೂರ್ವ ಚುನಾವಣೆ ನಿಶ್ಚಿತ : ವಿಜಯೇಂದ್ರ
ಬಿ.ವೈ.ವಿಜಯೇಂದ್ರ
ಶಿವಮೊಗ್ಗ: ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯಲ್ಲಿ ಸಿಎಂ ರಾಜೀನಾಮೆ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಇಂದು ಅಥವಾ ನಾಳೆ ರಾಜೀನಾಮೆ ಕೊಟ್ಟು ಯಾರು ಸಿಎಂ ಆಗುತ್ತಾರೆ ಎಂಬುದು ಮುಖ್ಯವಲ್ಲ. ಸಿಎಂ ಸಿದ್ದರಾಮಯ್ಯ ಬಗ್ಗೆ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಅತೀ ಹೆಚ್ಚು ಅನುಭವ ಇರುವಂತಹವರು ಸಿಎಂ ಸಿದ್ದರಾಮಯ್ಯ ಎಂದ ಅವರು, ದಕ್ಷಿಣ ಭಾರತದ ರಾಜ್ಯಗಳಿಗೆ ನೀವು ಹೋಲಿಕೆ ಮಾಡಿದರೆ 10 ಲಕ್ಷ ಕೋಟಿ ರೂ. ಸಾಲವನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು.
ಉಪಚುನಾವಣೆಯ ಗೆಲುವು ಸಿಎಂ ಸ್ಥಾನ ಉಳಿವಿಗೆ ಮಾನದಂಡವಾಗುವುದಿಲ್ಲ ಎಂದು ಹೇಳಿದ ಅವರು, ಅದು ಮಾನದಂಡವಾಗಿದ್ದರೆ ಸಿಎಂ ಬದಲಾವಣೆಯ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಯಾರೇ ಮುಖ್ಯಮಂತ್ರಿ ಆದರೂ ಅದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಅವಧಿ ಪೂರ್ವ ಚುನಾವಣೆ ಬಂದೇ ಬರುತ್ತದೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಸಂಘಟನೆ ಬಲಪಡಿಸಿ ಮುಂದಿನ ಚುನಾವಣೆಗೆ ಸಜ್ಜಾಗುವುದಾಗಿ ತಿಳಿಸಿದ ಅವರು, ಜನರ ಮುಂದೆ ನಮ್ಮ ಕೆಲಸದ ಆಧಾರದ ಮೇಲೆ ಹೋಗುತ್ತೇವೆ. ಆಡಳಿತ ವೈಫಲ್ಯ ನಮಗೆ ಬೋನಸ್‌ನಂತಿದೆ ಎಂದು ಹೇಳಿದರು.
ಸಿಎಂ ರಾಜೀನಾಮೆ ಕಷ್ಟ :
ಸಿಎಂ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ನನಗನಿಸಲ್ಲ. ಆದರೆ, ಹೈಕಮಾಂಡ್ ತೀರ್ಮಾನ ಮಾಡಿದ್ದರಿಂದ ರಾಜೀನಾಮೆ ಕೊಡುವ ಅನಿವಾರ್ಯತೆಯಿದೆ. ಆದರೆ ಯಾರು ಸಿಎಂ ಅಗುತ್ತಾರೆ ಎಂದು ಭಗವಂತನಿಗೆ ಗೊತ್ತು ಎಂದರು.