×
Ad

ರಾಜ್ಯಾದ್ಯಂತ ನೂತನ 150 ನಾಡ ಕಚೇರಿ ನಿರ್ಮಾಣ : ಕೃಷ್ಣ ಭೈರೇಗೌಡ

Update: 2026-05-26 23:45 IST

 ಕೃಷ್ಣ ಭೈರೇಗೌಡ

ಬೆಂಗಳೂರು : ರಾಜ್ಯ ವ್ಯಾಪಿ ನೂತನವಾಗಿ 150 ನಾಡ ಕಚೇರಿಗಳನ್ನು ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಮಂಗಳವಾರ ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿರುವ ಅವರು, 771 ಹೋಬಳಿ ಮಟ್ಟದ ನಾಡ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು 54 ಸೇವೆಗಳನ್ನು ಪಡೆಯಲು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ನಾಡ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಅನೇಕ ಪ್ರಮಾಣ ಪತ್ರಗಳು, ದಾಖಲೆಗಳು ಮಾತ್ರವಲ್ಲದೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿಯೂ ಭೇಟಿ ನೀಡುತ್ತಿರುತ್ತಾರೆ.

ಇದಲ್ಲದೆ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು (ಆರ್‌ ಐ) ಗ್ರಾಮ ಆಡಳಿತ ಅಧಿಕಾರಿಗಳ (ವಿಎ) ಬಳಿಯೂ ಕೆಲಸಕ್ಕಾಗಿ ಪ್ರತಿದಿನ ಸಾರ್ವಜನಿಕರು ಭೇಟಿ ನೀಡುತ್ತಾರೆ. ಸರಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ನಾಡಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಜನ ಸಂಪರ್ಕವಿರುವ ಕಚೇರಿಗಳಿಗೆ ಅನೇಕ ಕಡೆಗಳಲ್ಲಿ ಸ್ವಂತ ಕಟ್ಟಡಗಳಿಗಲ್ಲ. ಮತ್ತಷ್ಟು ಕಡೆ ಅಧಿಕಾರಿಗಳು ಹಳೇ ಕಟ್ಟಡಗಳಲ್ಲಿ ಅಥವಾ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಕುಳಿತು ಕಾರ್ಯ ನಿರ್ವಹಿಸುವಂತಹ ಸ್ಥಿತಿ ಇದೆ. ಸಾರ್ವಜನಿಕರ ಅನಾನುಕೂಲದ ಜತೆಗೆ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸ ಮಾಡಲು ಸುಸಜ್ಜಿತ ಕಚೇರಿ ಕಟ್ಟಡದ ಕೊರತೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಸರಕಾರ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಹಾಗೂ ಸಿಬ್ಬಂದಿಗೆ ಸುಸಜ್ಜಿತ ಕಚೇರಿ ಕಟ್ಟಡ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಹಾಲಿ ಸ್ವಂತ ಕಟ್ಟಡಗಳು ಇಲ್ಲದೇ ಇರುವಂತಹ ಮತ್ತು ಬಹಳ ಹಳೇಯ ಕಟ್ಟಡಗಳನ್ನು ಹೊಂದಿರುವ ನಾಡ ಕಚೇರಿಗಳನ್ನು ಗುರುತಿಸಿ ಮೊದಲ ಹಂತದಲ್ಲಿ 94 ನಾಡ ಕಚೇರಿಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಮುಂದುವರೆದು ಇನ್ನೂ 56 ನಾಡ ಕಚೇರಿಗಳನ್ನು ನಿರ್ಮಿಸಲು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಮೂಲಕ ಒಟ್ಟು 150 ನಾಡ ಕಚೇರಿಗಳಿಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ತೀರ್ಮಾನಿಸಿದಂತಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News