ಹೊಸ ಸಫಾರಿ, ಜಂಗಲ್ ಲಾಡ್ಜಸ್ ಆಸ್ತಿಗಳ ನವೀಕರಣಕ್ಕೆ ಕ್ರಮ: ಸಚಿವ ಕೆ.ಜೆ.ಜಾರ್ಜ್
ʼಪರಿಸರ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮ ವಿಸ್ತರಣೆʼ
ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ (Photo source: X)
ಬೆಂಗಳೂರು: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ರಾಜ್ಯದಲ್ಲಿ ಜವಾಬ್ದಾರಿಯುತ ಪರಿಸರ ಪ್ರವಾಸೋದ್ಯಮವನ್ನು ವಿಸ್ತರಿಸಲು ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಆಸ್ತಿಗಳನ್ನು ಹಂತ-ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ಪ್ರಕಟಣೆ ನೀಡಿರುವ ಅವರು, ಮುಥೋಡಿ ನೇಚರ್ ಕ್ಯಾಂಪ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಅರಣ್ಯ ಪ್ರದೇಶಗಳನ್ನು ಗುರುತಿಸಿ, ಅರಣ್ಯ ಇಲಾಖೆಯ ಅಗತ್ಯ ಕಾನೂನುಬದ್ಧ ಅನುಮತಿಗಳನ್ನು ಪಡೆದು ಹೊಸ ಸಫಾರಿ, ಟ್ರೆಕ್ಕಿಂಗ್ ಹಾಗೂ ಇತರೆ ಪ್ರಕೃತಿ ಆಧಾರಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಸ್ತಿಗಳಿಗೆ ಹೊಸ ರೂಪ: ಕಬಿನಿ, ಬಂಡೀಪುರ, ಕೆಮ್ಮಣ್ಣುಗುಂಡಿ ಸೇರಿದಂತೆ ಜೆಏಲ್ಆರ್ನ ಪ್ರಮುಖ ಆಸ್ತಿಗಳಲ್ಲಿರುವ ಕೊಠಡಿ, ಸ್ವಚ್ಛತೆ, ಆತಿಥ್ಯ ಮತ್ತು ಪ್ರವಾಸಿ ಸೌಲಭ್ಯಗಳನ್ನು ಸುಧಾರಿಸಲು ಆದ್ಯತೆ ನೀಡಲಾಗುವುದು. ಪ್ರತಿಯೊಂದು ಆಸ್ತಿಯ ವೈಶಿಷ್ಟ್ಯ ಮತ್ತು ನೈಸರ್ಗಿಕ ಪರಿಸರವನ್ನು ಕಾಪಾಡಿಕೊಂಡೇ ಅಗತ್ಯ ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಕಡೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಿ, ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪ್ರವಾಸೋದ್ಯಮದ ಲಾಭ: ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಅರಣ್ಯದಂಚಿನ ಗ್ರಾಮಗಳ ಜನರು ಮತ್ತು ಯುವಕರನ್ನು ತೊಡಗಿಸಿಕೊಳ್ಳಲು ಒತ್ತು ನೀಡಲಾಗಿದೆ. ಸ್ಥಳೀಯರಿಗೆ ಪ್ರಕೃತಿ ಮಾರ್ಗದರ್ಶಕರು, ಆತಿಥ್ಯ, ಆಹಾರ, ಸಾರಿಗೆ ಹಾಗೂ ಇತರೆ ಪ್ರವಾಸಿ ಸೇವೆಗಳಲ್ಲಿ ಅವಕಾಶ ಕಲ್ಪಿಸಿ, ಪರಿಸರ ಪ್ರವಾಸೋದ್ಯಮದಿಂದ ಸೃಷ್ಟಿಯಾಗುವ ಉದ್ಯೋಗ ಮತ್ತು ಆದಾಯದ ಲಾಭವನ್ನು ಸ್ಥಳೀಯ ಸಮುದಾಯಕ್ಕೂ ತಲುಪಿಸುವುದು ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಅರಣ್ಯ ಇಲಾಖೆ, ಕರ್ನಾಟಕ ಇಕೋ ಟೂರಿಸಮ್ ಡೆವಲಪ್ಮೆಂಟ್ ಬೋರ್ಡ್, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಡುವೆ ಸಮನ್ವಯ ಸಾಧಿಸಿ, ಪರಿಸರದ ಸಾಗುವಳಿ ಸಾಮರ್ಥ್ಯ, ವನ್ಯಜೀವಿಗಳ ಸುರಕ್ಷತೆ ಮತ್ತು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರಮುಖ ಮಾನದಂಡಗಳಾಗಿ ಪರಿಗಣಿಸಿ ಮುಂದಿನ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
‘ಪರಿಸರ ಪ್ರವಾಸೋದ್ಯಮವನ್ನು ವಿಸ್ತರಿಸಬೇಕು. ಆದರೆ ಅದು ಅರಣ್ಯದ ಸ್ವಾಭಾವಿಕ ಪರಿಸರ ಮತ್ತು ವನ್ಯಜೀವಿಗಳ ನೆಮ್ಮದಿಗೆ ಧಕ್ಕೆಯಾಗಬಾರದು. ಸೂಕ್ತ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಅಗತ್ಯ ಅನುಮತಿಗಳೊಂದಿಗೆ ಸಫಾರಿ, ಟ್ರೆಕ್ಕಿಂಗ್ ಮತ್ತು ಪ್ರಕೃತಿ ಆಧಾರಿತ ಪ್ರವಾಸಿ ಅನುಭವಗಳನ್ನು ಅಭಿವೃದ್ಧಿಪಡಿಸಲಾಗುವುದು. ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಆಸ್ತಿಗಳನ್ನೂ ಅವುಗಳ ನೈಸರ್ಗಿಕ ವೈಶಿಷ್ಟ್ಯವನ್ನು ಕಾಪಾಡಿಕೊಂಡೇ ಉತ್ತಮ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸುವುದು ನಮ್ಮ ಉದ್ದೇಶವಾಗಿದೆ’
-ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಸಚಿವ
‘ಅರಣ್ಯ ಇಲಾಖೆ, ಕರ್ನಾಟಕ ಇಕೋ ಟೂರಿಸಮ್ ಡೆವಲಪ್ಮೆಂಟ್ ಬೋರ್ಡ್ ಮತ್ತು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಡುವೆ ಸಮನ್ವಯ ಸಾಧಿಸಿ ಪರಿಸರ ಪ್ರವಾಸೋದ್ಯಮವನ್ನು ನಿಯಂತ್ರಿತ ಹಾಗೂ ಸುಸ್ಥಿರ ಮಾದರಿಯಲ್ಲಿ ವಿಸ್ತರಿಸಲಾಗುವುದು. ವನ್ಯಜೀವಿಗಳ ಸುರಕ್ಷತೆ, ಪರಿಸರದ ಸಾಗುವಳಿ ಸಾಮಥ್ರ್ಯ ಮತ್ತು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಿ ಹೊಸ ಚಟುವಟಿಕೆಗಳು ಹಾಗೂ ಜೆಎಲ್ಆರ್ ಆಸ್ತಿಗಳ ನವೀಕರಣವನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು’
-ಡಾ.ರಾಮ್ ಪ್ರಸಾತ್ ಮನೋಹರ್, ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ
‘ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಜವಾಬ್ದಾರಿಯುತ ಪ್ರಕೃತಿ ಆಧಾರಿತ ಪ್ರವಾಸೋದ್ಯಮದ ಮೂಲಕ ತನ್ನದೇ ಆದ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದೆ. ನಮ್ಮ ಆಸ್ತಿಗಳನ್ನು ಮೇಲ್ದರ್ಜೆಗೇರಿಸುವಾಗಲೂ ಮತ್ತು ಹೊಸ ಪರಿಸರ ಪ್ರವಾಸೋದ್ಯಮ ಅನುಭವಗಳನ್ನು ರೂಪಿಸುವಾಗಲೂ, ಪ್ರತಿಯೊಂದು ತಾಣದ ನೈಸರ್ಗಿಕ ವೈಶಿಷ್ಟ್ಯವನ್ನು ಕಾಪಾಡುವುದು, ಪ್ರವಾಸಿಗರ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಸ್ಥಳೀಯ ಸಮುದಾಯಗಳಿಗೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಭಾಗವಹಿಸುವುದು ಮತ್ತು ಆರ್ಥಿಕ ಲಾಭದ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆದ್ಯತೆಯಾಗಿರುತ್ತದೆ;
-ಅನಿಲ್ ಮಧು, ಅಧ್ಯಕ್ಷ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್