×
Ad

ಏರ್‌ಟೆಲ್ ಸಿಮ್ ಇದ್ದರೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ.ಖೋತಾ?

Update: 2026-06-19 23:41 IST

ಬೆಂಗಳೂರು : ಏರ್‌ಟೆಲ್ ಮೊಬೈಲ್ ಸಿಮ್ ಬಳಕೆ ಮಾಡುವ ಗೃಹಲಕ್ಷ್ಮೀ ಯೋಜನೆ ಫಲಾನುಭವಿಯ 2 ಸಾವಿರ ರೂಪಾಯಿ ಕಳವು ಆಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ..

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಏರ್‌ ಟೆಲ್ ಮೊಬೈಲ್ ಸಿಮ್ ಬಳಕೆದಾರರಿಗೆ ಲಭ್ಯವಾಗುವ ಏರ್‌ ಟೆಲ್ ಆ್ಯಪ್ ಬ್ಯಾಂಕ್‍ನಲ್ಲಿ ಯುಪಿಐ ಖಾತೆಗಳನ್ನು ತೆಗೆದು ಗೃಹಲಕ್ಷ್ಮೀ ಯೋಜನೆ ಫಲಾನುಭವಿಯ 2ಸಾವಿರ ರೂಪಾಯಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಗಮನಕ್ಕೆ ತಂದರು.

ಈ ವೇಳೆ ಡಿ.ಕೆ.ಶಿವಕುಮಾರ್, ‘ಬ್ಯಾಂಕ್ ಖಾತೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇರಬೇಕು. ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೆ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಇವುಗಳಿಗೆ ತಡೆ ಹಾಕಬೇಕು. ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಇತರೆ ರಾಜ್ಯದ ಮತದಾರರಿಗೆ ಯೋಜನೆಯ ಲಾಭ ಆಗುತ್ತಿದೆ. ಇದನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ರೀತಿ, ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮೀ ಯೋಜನೆ ಹಣ ಹೋಗುತ್ತಿರುವುದನ್ನು ಪತ್ತೆಯಾಗಿದೆ. ಈ ರೀತಿ ದುರುಪಯೋಗ ಆಗಬಾರದು. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಜಾರಿ ವೇಳೆ ಹೆಚ್ಚಿನ ದುರುಪಯೋಗ ಆಗದ ಹಾಗೆ ಎಚ್ಚರಿಕೆ ವಹಿಸಿದ್ದರು. ಇದೇ ಎಚ್ಚರಿಕೆ ಇತರೆ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ಬರಲಿದೆ ವಾಯ್ಸ್ ಸಂದೇಶ: ‘ರಾಜ್ಯ ಕಾಂಗ್ರೆಸ್ ಸರಕಾರದ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲ್ ಫೋನ್‍ಗೆ ವಾಯ್ಸ್(ಧ್ವನಿ)ಸಂದೇಶ ಮೂಲಕ ಖಚಿತಪಡಿಸುವ ಪ್ರಕ್ರಿಯೆ ಜಾರಿಗೆ ತರುತ್ತೇವೆ’

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News