ಸಿಮ್ ಸ್ವಾಪ್ ವಂಚನೆಯಾದರೆ ಟೆಲಿಕಾಂ ಕಂಪನಿಗಳೇ ಹೊಣೆ; ಹೈಕೋರ್ಟ್ ತೀರ್ಪು
ಬೆಂಗಳೂರು : ನಿರ್ಲಕ್ಷ್ಯದಿಂದ ನಕಲಿ ಸಿಮ್‌ಗಳನ್ನು ನೀಡುವ ಮೂಲಕ ಸಿಮ್ ಸ್ವಾಪ್ ವಂಚನೆಗೆ ಅನುವು ಮಾಡಿಕೊಡುವ ಟೆಲಿಕಾಂ ಸೇವಾ ಸಂಸ್ಥೆಗಳೇ ವಂಚನೆಯಿಂದಾಗುವ ಹಣದ ನಷ್ಟಕ್ಕೆ ಸಂಪೂರ್ಣ ಜವಾಬ್ದಾರಿಯಾಗಲಿವೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಜತೆಗೆ, ಶಿವಮೊಗ್ಗದ ಸಹಕಾರ ಬ್ಯಾಂಕ್ ಒಂದರ ಸಿಮ್ ಕಾರ್ಡ್ ಸ್ವಾಪ್‌ಗೆ ಅವಕಾಶ ನೀಡಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ 55 ಲಕ್ಷ ರೂ. ಪರಿಹಾರ ಪಾವತಿಸುವಂತೆ ಭಾರತ ಸಂಚಾರ ನಿಗಮ ಲಿಮಿಟೆಡ್‌ಗೆ (ಬಿಎಸ್‌ಎನ್ಎಲ್) ನಿರ್ದೇಶಿಸಿದೆ.
ಡಿಜಿಟಲ್ ಹಣಕಾಸು ವಹಿವಾಟಿನ ಇಂದಿನ ಯುಗದಲ್ಲಿ, ನಕಲಿ ಸಿಮ್ ಅನ್ನು ಬದಲಾಯಿಸುವ ಅಥವಾ ನೀಡುವ ಮೊದಲು ಚಂದಾದಾರರ ಗುರುತನ್ನು ಪರಿಶೀಲಿಸುವುದು ಕೇವಲ ಖಾಲಿ ಔಪಚಾರಿಕತೆಯಲ್ಲ ಎಂದಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಏಕಸದಸ್ಯ ನ್ಯಾಯಪೀಠ, ಇದು (ಸಿಮ್ ನೀಡುವುದಕ್ಕೂ ಮುನ್ನ ಪರಿಶೀಲನೆ) ಒಂದು ನಿರ್ಣಾಯಕ ಭದ್ರತಾ ಕ್ರಮವಾಗಿದ್ದು, ಲಕ್ಷಾಂತರ ಬ್ಯಾಂಕ್ ಖಾತೆದಾರರ ಆರ್ಥಿಕ ಸುರಕ್ಷತೆಯು ಇದನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.
ಆದ್ದರಿಂದ, ನಕಲಿ ಸಿಮ್‌ಗಳನ್ನು ನೀಡುವಾಗ ನಿರ್ಲಕ್ಷ್ಯದಿಂದ ನಡೆದುಕೊಂಡಿರುವುದು ಕಂಡು ಬಂದರೆ ಸೈಬರ್ ವಂಚನೆಯಿಂದಾಗಿ ಗ್ರಾಹಕರು ಅನುಭವಿಸಿದ ನಷ್ಟವನ್ನು ದೂರಸಂಪರ್ಕ ಕಂಪನಿಗಳನ್ನು ಸಂಪೂರ್ಣ ಹೊರಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಿಎಸ್‌ಎನ್‌ಎಲ್ ಕರ್ತವ್ಯಲೋಪ:
ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತವು ಬಿಎಸ್‌ಎನ್‌ಎಲ್ ನಂಬರ್ ಹೊಂದಿದ್ದು, ಸಿಮ್ ಸ್ವ್ಯಾಪ್ ವಂಚನೆಯಿಂದ 2019ರಲ್ಲಿ 87 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್‌ನಿಂದ ಕಳೆದುಕೊಂಡಿತ್ತು. ಬ್ಯಾಂಕ್‌ಗೆ ಸೇರಿದ ನಂಬರ್ ಅನ್ನು ಬಿಎಸ್‌ಎನ್‌ಎಲ್ ನಿರ್ಲಕ್ಷ್ಯದಿಂದ ವಂಚಕನಿಗೆ ನೀಡಿತ್ತು. ಇದರಿಂದ, ಬ್ಯಾಂಕ್ ಹಣವನ್ನು ವರ್ಗಾಯಿಸುವಾಗ ಬರುವ ಒಟಿಪಿಯು ನಕಲಿ ಸಿಮ್ ಹೊಂದಿರುವವರೆಗೆ ಹೋಗಿದ್ದು, ವಂಚನೆಯಾಗಿದೆ ಎಂದು ವಾದಿಸಿದೆ. ಈ ನೆಲೆಯಲ್ಲಿ ಬಿಎಸ್‌ಎನ್‌ಎಲ್ ನಿರ್ಲಕ್ಷ್ಯತನಿಂದ ಕರ್ತವ್ಯಲೋಪ ಎಸಗಿದ್ದು, ಅದರ ಉದ್ಯೋಗಿಯು ಸರಿಯಾಗಿ ಪರಿಶೀಲನೆ ನಡೆಸದೆ ನಕಲಿ ಸಿಮ್ ಕಾರ್ಡ್ ನೀಡಿದ್ದಾರೆ. ಬಿಎಸ್‌ಎನ್‌ಎಲ್ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿದ್ದರೆ, ನಕಲಿ ಸಿಮ್ ನೀಡಲಾಗುತ್ತಿರಲಿಲ್ಲ ಮತ್ತು ಆನಂತರ ಸೈಬರ್ ವಂಚನೆ ನಡೆಯುತ್ತಿರಲಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ನಕಲಿ ಸಿಮ್ ಚಂದಾದಾರರಲ್ಲದವರನ್ನು ತಲುಪಿದೆ ಎಂಬ ಅಂಶವೇ ಪರಿಶೀಲನೆಯನ್ನು ನಡೆಸಲಾಗಿಲ್ಲ ಅಥವಾ ನಿಷ್ಪ್ರಯೋಜಕವಾಗುವಷ್ಟು ಕಾಟಾಚಾರಕ್ಕೆ ಪರಿಶೀಲನೆ ನಡೆಸಲಾಗಿದೆ ಎಂಬುದಕ್ಕೆ ಪುರಾವೆಯಾಗಿದೆ. ಬಿಎಸ್‌ಎನ್‌ಎಲ್‌ನಂತಹ ದೂರಸಂಪರ್ಕ ಸೇವಾ ಪೂರೈಕೆದಾರರು ನಿರ್ಣಾಯಕ ಮೂಲಸೌಕರ್ಯ ಪೂರೈಕೆದಾರರಾಗಿದ್ದು, ಲಕ್ಷಾಂತರ ನಾಗರಿಕರು ಮತ್ತು ಸಂಸ್ಥೆಗಳು ತಮ್ಮ ಆರ್ಥಿಕ ಭದ್ರತೆಗಾಗಿ ಅವಲಂಬಿಸಿರುವ ಮೊಬೈಲ್ ಸಂಪರ್ಕವನ್ನು ನಂಬುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಟೆಲಿಕಾಂ ಸೇವಾ ಪೂರೈಕೆದಾರರು ನಕಲಿ ಸಿಮ್ ಅನ್ನು ಅಜಾಗರೂಕತೆಯಿಂದ ನೀಡಿದಾಗ, ಅದು ಕೇವಲ ಒಬ್ಬ ಚಂದಾದಾರರಿಗೆ ಹಾನಿ ಉಂಟು ಮಾಡುವುದಿಲ್ಲ, ಅದು ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ವ್ಯವಸ್ಥಿತ ದುರ್ಬಲತೆಯನ್ನು ಅನಾವರಣಗೊಳಿಸುತ್ತದೆ. ಆದ್ದರಿಂದ, ಡಿಜಿಟಲ್ ಆರ್ಥಿಕತೆಯಲ್ಲಿ ಬಿಎಸ್ಎನ್ಎಲ್ ನಂತಹ ದೂರಸಂಪರ್ಕ ಸೇವಾ ಪೂರೈಕೆದಾರರ ಜವಾಬ್ದಾರಿ ಕೇವಲ ಖಾಸಗಿ ಮತ್ತು ಒಪ್ಪಂದದ ಮೇಲಲ್ಲ. ಅದು ವ್ಯವಸ್ಥಿತ ಮತ್ತು ಸಾರ್ವಜನಿಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪರಿಹಾರ ಪಾವತಿಗೆ ಆದೇಶ:
ಭಾರತದಲ್ಲಿ ಸಿಮ್ ಸ್ವಾಪ್ ವಂಚನೆ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ನ್ಯಾಯಪೀಠ, ಇಂಥ ಸೈಬರ್ ವಂಚನೆ ತಡೆಯಲು ಕಠಿಣವಾದ ನಿಯಂತ್ರಣ ಕ್ರಮಕಗಳನ್ನು ಅನುಸರಿಬೇಕು ಎಂದು ನಿರ್ದೇಶಿಸಿದೆಯಲ್ಲದೆ, ಬ್ಯಾಂಕ್‌ಗೆ ಆಗಿರವ ನಷ್ಟವನ್ನು ವಸೂಲಿ ಮಾಡಲಾಗದಿದ್ದರೆ 50.5 ಲಕ್ಷ ರೂ.ಗಳನ್ನು ಬ್ಯಾಂಕ್‌ಗೆ ಬಿಎಎಸ್‌ಎನ್‌ಎಲ್ ನೀಡಬೇಕು. ಸೈಬರ್ ವಂಚನೆಯಿಂದಾಗಿರುವ ಸಮಸ್ಯೆಯ ಪರಿಹಾರದ ಭಾಗವಾಗಿ ಹೆಚ್ಚುವರಿಯಾಗಿ 5 ಲಕ್ಷ ರೂ.ಗಳನ್ನೂ ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.