ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ, ಅವರು ರಾಜೀನಾಮೆ ಹಿಂಪಡೆದಿದ್ದಾರೆ : ಸುರ್ಜೇವಾಲ
ರಾಮಲಿಂಗಾರೆಡ್ಡಿ \ ರಣದೀಪ್ ಸಿಂಗ್ ಸುರ್ಜೇವಾಲ(PTI)
ಬೆಂಗಳೂರು : “ರಾಮಲಿಂಗಾರೆಡ್ಡಿ ಅವರ ಅನುಭವ, ಜಾಣ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಮೂಲ್ಯವಾದುದು. ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರ್ಜೇವಾಲ ಅವರು ಶನಿವಾರ ಮಾತನಾಡಿದರು.
“ನಮ್ಮ ಪಕ್ಷದ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರ ಬಗ್ಗೆ ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ಊಹಾಪೋಹ ಹರಡುತ್ತಿದ್ದಾರೆ. ರಾಮಲಿಂಗಾರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ಜೊತೆಗೆ ಎನ್ಎಸ್ ಯುಐ ಸಮಯದಿಂದಲೂ ಕೆಲಸ ಮಾಡಿದ್ದಾರೆ. 1973ರಿಂದ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ನಮ್ಮ ಪಕ್ಷದ ಕೆಲವು ನಾಯಕರು ಆಗ ಇನ್ನು ಹುಟ್ಟೇ ಇರಲಿಲ್ಲ. ಅವರು 1989ರಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. 8 ಬಾರಿ ಶಾಸಕರಾಗಿ, ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ” ಎಂದು ತಿಳಿಸಿದರು.
“ರಾಮಲಿಂಗಾರೆಡ್ಡಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಹಾಗೂ ರಾಜ್ಯಾದ್ಯಂತ ಲಕ್ಷಾಂತರ ಕಾರ್ಯಕರ್ತರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಾಧ್ಯಮಗಳು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿಯನ್ನು ಪ್ರಕಟಿಸಿದಾಗ, ನಾನು ಸೇರಿದಂತೆ ಶಿವಕುಮಾರ್, ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ಅವರು ರಾಮಲಿಂಗಾ ರೆಡ್ಡಿ ಅವರೊಂದಿಗೆ ಚರ್ಚೆ ಮಾಡಿದ್ದೆವು. ಕೆಲವು ತಪ್ಪು ಸಂವಹನದಿಂದಾಗಿ ರಾಮಲಿಂಗಾರೆಡ್ಡಿ ಅವರು ನಮ್ಮನ್ನು ಮತ್ತೊಮ್ಮೆ ಭೇಟಿ ಮಾಡಿದ್ದರು. ಅವರು ತಮ್ಮ ರಾಜೀನಾಮೆ ಹಿಂಪಡೆದಿರುವ ಬಗ್ಗೆ ಈಗಾಗಲೇ ನಿಮಗೆ ಮಾಹಿತಿ ನೀಡಿದ್ದಾರೆ. ಅವರು ಮುಂದೆಯೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕನಾಗಿ ಹಾಗೂ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಗೆ ನಿರಾಸೆಯಾಗಿದೆ:
“ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಸ್ತಾಂತರ ಸುಗಮವಾಗಿ ಸಾಗಿರುವುದರಿಂದ ಆಘಾತಕ್ಕೆ ಒಳಗಾಗಿರುವ ಬಿಜೆಪಿ, ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯುವ ನಿರೀಕ್ಷೆಯಲ್ಲಿತ್ತು. ಈ ಕಾರಣಕ್ಕೆ ಅವರು ವಿಕೆಟ್ ಬೀಳುತ್ತಿದೆ ಎಂದೆಲ್ಲಾ ಮಾತನಾಡಿದ್ದರು. ಆದರೆ ಅವರಿಗೆ ಈಗ ನಿರಾಸೆಯಾಗಿದೆ. ವಿಜಯೇಂದ್ರ ಹಾಗೂ ಅಶೋಕ್ ಅವರೇ ನೀವು ಜನರ ಮುಂದೆ ನಿರಂತರವಾಗಿ ಕ್ಲೀನ್ ಬೋಲ್ಡ್ ಆಗಲಿದ್ದೀರಿ. ಜನರ ವಿಶ್ವಾಸ ಗಳಿಸಬೇಕಾದರೆ, ಪ್ರಾಮಾಣಿಕತೆ, ಬದ್ಧತೆ, ಜನರ ಸೇವೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅವುಗಳನ್ನು ಮಾಡಿಕೊಂಡು ಬಂದಿದೆ” ಎಂದು ತಿಳಿಸಿದರು.