ಸರಕಾರಿ ಜಮೀನು ಒತ್ತುವರಿ ಆರೋಪ; ರಿಟ್ ಅರ್ಜಿ ತಿದ್ದುಪಡಿಗೆ ಎಚ್‌ಡಿಕೆಗೆ ಅನುಮತಿಸಿದ ಹೈಕೋರ್ಟ್
ಬೆಂಗಳೂರು: ಕೇತಗಾನಹಳ್ಳಿಯಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಸ್ಐಟಿ (ವಿಶೇಷ ತನಿಖಾ ದಳ) ರಚನೆ ಆದೇಶ ಪ್ರಶ್ನಿಸಲಾಗಿರುವ ಅರ್ಜಿಯನ್ನು ತಿದ್ದುಪಡಿ ಮಾಡಲು ಅರ್ಜಿದಾರರೂ ಆದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎ.ವಿ. ನಿಶಾಂತ್ ವಾದ ಮಂಡಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಸೆಕ್ಷನ್ 195 ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ–2011ರ ಸೆಕ್ಷನ್ 8ರ ಅಡಿಯಲ್ಲಿ ಎಸ್‌ಐಟಿ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಅರ್ಜಿದಾರರು ಈ ಆದೇಶದ ರಾಜ್ಯಪತ್ರದ ಪ್ರತಿಯನ್ನು ಕೇಳಿದಾಗ ತಿದ್ದುಪಡಿ ಪತ್ರ ಪ್ರಕಟಿಸಲಾಗಿದೆ. ಜತೆಗೆ, ಯಾವ ಸೆಕ್ಷನ್‌ಗಳ ಅಡಿ ಆದೇಶ ಹೊರಡಿಸಲಾಗಿತ್ತೋ ಅವುಗಳನ್ನು ತಿದ್ದುಪಡಿ ಪತ್ರದಲ್ಲಿ ತೆಗೆದುಹಾಕಲಾಗಿದೆ. ಆದ್ದರಿಂದ, ಅರ್ಜಿದಾರರು ಈಗಾಗಲೇ ಸಲ್ಲಿಸಿರುವ ರಿಟ್ ಅರ್ಜಿಗೆ ಈ ಸಂಬಂಧ ತಿದ್ದುಪಡಿ ಮಾಡಿದ ರಿಟ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ತಿದ್ದುಪಡಿ ಮಾಡಲಾದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು.