×
Ad

Shivamogga | ಬಸ್ ತಂಗುದಾಣದಲ್ಲಿ ನವಜಾತ ಹೆಣ್ಣು ಮಗು ಪತ್ತೆ

Update: 2026-07-06 12:37 IST

ಶಿವಮೊಗ್ಗ: ನವಜಾತ ಹೆಣ್ಣು ಮಗುವನ್ನು ಚೀಲದಲ್ಲಿ ಕಟ್ಟಿ, ಬಾಯಿಗೆ ಫೀಡಿಂಗ್ ಬಾಟಲ್ ಇಟ್ಟು ತೊರೆದು ಹೋಗಿರುವ ಅಮಾನವೀಯ ಘಟನೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗವಟೂರು ಹೊಳೆ ಸಮೀಪದ ಬಿಳಕಿ ಗ್ರಾಮದ ತೆಂಕೋಲ್ ಬಸ್ ನಿಲ್ದಾಣದಲ್ಲಿ ಈ ನವಜಾತ ಶಿಶು ಪತ್ತೆಯಾಗಿದೆ. ರವಿವಾರ (ಜು.5) ರಾತ್ರಿ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದ ದಾರಿಹೋಕರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಮೊದಲಿಗೆ ಅದು ನಾಯಿ ಅಥವಾ ಬೆಕ್ಕಿನ ಮರಿ ಇರಬಹುದೆಂದು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ, ಚೀಲದೊಳಗೆ ನವಜಾತ ಹೆಣ್ಣು ಮಗು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ರಿಪ್ಪನ್ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪಿಎಸ್ಸೈ ರಾಜು ರೆಡ್ಡಿ ಮತ್ತು ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ರಾತ್ರಿ ಸುಮಾರು 9 ಗಂಟೆ ವೇಳೆ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ.

ಆಂಬುಲೆನ್ಸ್ ಮೂಲಕ ಮಗುವನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಅಗತ್ಯ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಪ್ರಾಥಮಿಕ ಪರೀಕ್ಷೆಯಲ್ಲಿ ಮಗು ಆರೋಗ್ಯವಾಗಿರುವುದು ತಿಳಿದುಬಂದಿದೆ. ಹೆಚ್ಚಿನ ಆರೈಕೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News