Belagavi | ರೈತರ ಕರೆಗೆ ಉತ್ತಮ ಸ್ಪಂದನ: ಬೈಲಹೊಂಗಲ ಬಂದ್
ಬೆಳಗಾವಿ : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಜೈ ಜವಾನ್ ಜೈ ಕಿಸಾನ್ ರೈತ ಸಂಘದ ನೇತೃತ್ವದಲ್ಲಿ ಇಂದು ಕರೆ ನೀಡಲಾಗಿದ್ದ ಬೈಲಹೊಂಗಲ ನಗರ ಬಂದ್ ಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ವಕೀಲರು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಮಾಜಿ ಸೈನಿಕರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಹೋರಾಟಕ್ಕೆ ಬಲ ತುಂಬಿದವು.
ಬಂದ್ ಗೆ ನಗರದ ವ್ಯಾಪಾರಸ್ಥರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಮೂಲಕ ರೈತರ ನ್ಯಾಯಯುತ ಬೇಡಿಕೆಗಳಿಗೆ ವ್ಯಾಪಾರಸ್ಥರು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಬಂದ್ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳ ಸಂಚಾರ ಸೇರಿದಂತೆ ನಗರದಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವ್ಯಾಪಾರ ವಹಿವಾಟು ಹಾಗೂ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಇಡೀ ನಗರ ಸ್ತಬ್ಧವಾಗಿತ್ತು.
ರೈತರ ಬೇಡಿಕೆಗಳಿಗೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶದೊಂದಿಗೆ ಬೈಲಹೊಂಗಲ ಬಂದ್ ಯಶಸ್ವಿಯಾಗಿ ಸಂಪನ್ನಗೊಂಡಿತು.