ಬೆಂಗಳೂರು : ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಸೆ.18ರಂದು ಗಣೇಶ ವಿಸರ್ಜನೆ ಶೋಭಾಯಾತ್ರೆಯಲ್ಲಿ ದಲಿತ ಸಮುದಾಯದ ನಾಯಕರನ್ನು ಅವಹೇಳನ ಮಾತನಾಡಿದ ಆರೋಪದ ಮೇಲೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ದಾಖಲಾಗಿದ್ದ ಎರಡು ಪ್ರಕರಣದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹಗೆ ಮಧ್ಯಂತರ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಟಿ.ನರಸೀಪುರ ಠಾಣೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯ್ದೆ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಎರಡು ಪ್ರತ್ಯೇಕ ಎಫ್ ಐ ಆರ್ ದಾಖಲಾಗಿತ್ತು. ಈ ಎರಡೂ ಎಫ್ ಐ ಆರ್ ರದ್ದು ಕೋರಿ ಪ್ರತಾಪ್ ಸಿಂಹ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ಪ್ರತಾಪ್ ಸಿಂಹ ಪರವಾಗಿ ಹಿರಿಯ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ ಐ ಆರ್ ದಾಖಲು ಮಾಡಲಾಗಿದೆ. ಆದರೆ, ಪ್ರಕರಣ ದಾಖಲಿಸಿರುವ ದಿನಾಂಕ ಬೇರೆ ಅಷ್ಟೆ. ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಮುಂದೆ ಹೋಗಬಾರದು ಎಂಬುದಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ. ಹಾಕಿರುವ ಸೆಕ್ಷನ್ ಗಳೆಲ್ಲ ಐದು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವಂತವು. ಹೀಗಾಗಿ ಮೊದಲು ತನಿಖೆ ಮಾಡಬೇಕಿತ್ತು. ನಂತರ ಎಫ್ ಐ ಆರ್ ದಾಖಲಿಸಬೇಕಿತ್ತು ಎಂದರು.

ಇದಕ್ಕೆ ಸರಕಾರದ ಪರ ವಾದ ಮಾಡಿದ ಜಗದೀಶ್ ಪ್ರತಾಪ್‌ ಅವರು, ಒಂದು ಪದ ಎತ್ತಿಕೊಂಡು ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ಒಂದು ಪಕ್ಷದ ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ನ್ಯಾಯಾಲಯಗಳೇ ಡಿಜೆ ಹಾಕಬೇಡಿ ಎಂದು ಹೇಳುತ್ತಿವೆ. ಡೊಳ್ಳು ಕುಣಿತ ನಡೆಸಿ ಎಂದು ಪೊಲೀಸ್‌ ಹೇಳಿದ್ದಾರೆ. ಹೀಗೆ ಹೇಳುವುದು ಸಮಸ್ಯೆಯಾಗುತ್ತದೆಯೇ? ಕಳೆದ ಬಾರಿ ಮಂಡ್ಯದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿವಾದವಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್‌ ಧನಂಜಯ್‌ ಎಚ್ಚರಿಕೆ ನೀಡಿದ್ದರು‌ ಎಂದರು.

ನಂತರ ಮಂಗಳವಾರದವರೆಗೆ ಆರೋಪ ಪಟ್ಟಿ ಸಲ್ಲಿಸದಂತೆ ಸರಕಾರಕ್ಕೆ ನಿರ್ದೇಶನ ನೀಡಿದ ಪೀಠ, ಪ್ರತಾಪ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸಲು ನಿರಾಕರಿಸಿ ವಿಚಾರಣೆಯನ್ನ ಮಂಗಳವಾರಕ್ಕೆ ಮುಂದೂಡಿತು.

ನಂತರ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಪೀಠಕ್ಕೆ ಪ್ರತಾಪ್ ಸಿಂಹ ಪರ ವಕೀಲ ವೆಂಕಟೇಶ್ ಈ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಲು ಮನವಿ ಮಾಡಿದರು.

ಆದರೆ ನ್ಯಾಯಪೀಠ,  ಸುಪ್ರೀಂ ಕೋರ್ಟ್‌ ಆದೇಶವೇ ಇದೆ ಏನೂ ಮಾಡಲಾಗದು ಎಂದು ಹೇಳಿ, ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor