ʼವಿದ್ಯಾರ್ಥಿಗಳಲ್ಲಿ 7 ಸಾವಿರ ಎಚ್‍ಐವಿ ಪ್ರಕರಣ ಪತ್ತೆʼ ಎಂಬುದು ಸುಳ್ಳು: ಸ್ಪಷ್ಟನೆ

Update: 2026-07-30 20:34 IST

ಸಾಂದರ್ಭಿಕ ಚಿತ್ರ | Image by jcomp on Magnific

ಬೆಂಗಳೂರು : ರಾಜ್ಯದ ಸುಮಾರು 7 ಸಾವಿರ ವಿದ್ಯಾರ್ಥಿಗಳಿಗೆ ಎಚ್‍ಐವಿ ಸೋಂಕು ತಗುಲಿದೆ ಮತ್ತು ಸರಕಾರವು ಕಾಲೇಜುಗಳಲ್ಲಿ ಎಚ್‍ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಯೋಜನಾ ನಿರ್ದೇಶಕ ಪದ್ಮಾ ಬಸವಂತಪ್ಪ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ವರದಿಗಳು ಸಂಪೂರ್ಣ ಸುಳ್ಳು ಮತ್ತು ಸಾರ್ವಜನಿಕರನ್ನು ಹಾದಿ ತಪ್ಪಿಸುವಂತಹದ್ದಾಗಿವೆ. ಆರೋಗ್ಯ ಇಲಾಖೆಯು ವಿದ್ಯಾರ್ಥಿಗಳು, ಗೃಹಿಣಿಯರು ಅಥವಾ ಕುಟುಂಬದ ಸದಸ್ಯರು ಎಂಬ ವರ್ಗಗಳ ಆಧಾರದ ಮೇಲೆ ಎಚ್‍ಐವಿ ದತ್ತಾಂಶವನ್ನು ನಿರ್ವಹಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಮಾತ್ರ ಸಂಬಂಧಿಸಿದ ಯಾವುದೇ ಪ್ರತ್ಯೇಕ ಅಂಕಿ-ಅಂಶಗಳು ಇಲಾಖೆಯ ಬಳಿ ಇಲ್ಲ ಎಂದಿದ್ದಾರೆ.

ಜಾರಿಯಲ್ಲಿರುವ ನಿಯಮಗಳ ಪ್ರಕಾರ 2004 ರಿಂದ ಇದುವರೆಗೆ 18 ರಿಂದ 35 ವರ್ಷದೊಳಗಿನ ಒಟ್ಟು ವಯೋಮಾನದವರಲ್ಲಿ ಸುಮಾರು 39 ಸಾವಿರ ಎಚ್‍ಐವಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆಯೇ ಹೊರತು, ಕೇವಲ ವಿದ್ಯಾರ್ಥಿಗಳದ್ದೇ ಅಷ್ಟು ಸಂಖ್ಯೆಯಿಲ್ಲ. ಇದರೊಂದಿಗೆ, ಎಚ್‍ಐವಿ ಮತ್ತು ಏಡ್ಸ್ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 2017ರ ಅನ್ವಯ ಯಾರಿಗೂ ಎಚ್‍ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವಂತಿಲ್ಲ. ಯಾವುದೇ ವ್ಯಕ್ತಿ ಪರೀಕ್ಷೆಗೆ ಒಳಗಾಗಬೇಕಾದರೆ ಅಥವಾ ಚಿಕಿತ್ಸೆ ಪಡೆಯಬೇಕಾದರೆ ಅವರ ಪೂರ್ಣ ಸಮ್ಮತಿ ಅಗತ್ಯವಾಗಿರುತ್ತದೆ ಎಂದು ಪದ್ಮಾ ಬಸವಂತಪ್ಪ ವಿವರಿಸಿದ್ದಾರೆ.

ಹೀಗಾಗಿ ಕಾಲೇಜುಗಳಲ್ಲಿ ಕೇವಲ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆಯೇ ಹೊರತು, ಪರೀಕ್ಷೆಯನ್ನು ಕಡ್ಡಾಯ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕಾಲೇಜುಗಳು ಸೇರಿದಂತೆ ಕೈಗಾರಿಕೆಗಳು, ಸಾಫ್ಟ್‌ ವೇರ್ ಕಂಪೆನಿಗಳು, ಪೊಲೀಸ್ ಮತ್ತು ಸಾರಿಗೆ ಇಲಾಖೆಗಳಲ್ಲಿ ಸುರಕ್ಷಿತ ಜೀವನಶೈಲಿ ಹಾಗೂ ಸ್ವಯಂಪ್ರೇರಿತ ತಪಾಸಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಸದ್ಯ ಸುಮಾರು 56 ಸಾವಿರ ಜನರಿಗೆ ತಮಗೆ ಎಚ್‍ಐವಿ ಸೋಂಕು ಇರುವುದೇ ತಿಳಿದಿಲ್ಲ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೋಂಕಿತರಲ್ಲಿ ಕೇವಲ ಶೇ.12 ರಷ್ಟು ಜನರು ಮಾತ್ರ ಸ್ವಯಂಪ್ರೇರಿತರಾಗಿ ತಪಾಸಣಾ ಕೇಂದ್ರಗಳಿಗೆ ಬರುತ್ತಿರುವುದರಿಂದ ಎಚ್‍ಐವಿ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಇದಕ್ಕಾಗಿ ಇಲಾಖೆಯು 'ಬ್ರೇಕ್ ಫ್ರೀ' ಎಂಬ ಮೊಬೈಲ್ ಆಪ್ ಅನ್ನು ಪರಿಚಯಿಸಿದ್ದು, ಯಾವುದೇ ವೈಯಕ್ತಿಕ ಮಾಹಿತಿ ನೀಡದೆ ಕೇವಲ 7 ಪ್ರಶ್ನೆಗಳ ಮೂಲಕ ಜನರು ತಮ್ಮ ಆರೋಗ್ಯದ ಅಪಾಯವನ್ನು ತಾವೇ ರಹಸ್ಯವಾಗಿ ಮೌಲ್ಯಮಾಪನ ಮಾಡಿಕೊಳ್ಳಬಹುದು. ಅಪಾಯದ ಲಕ್ಷಣಗಳಿದ್ದರೆ ಹತ್ತಿರದ ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ ಎಂದು ಪದ್ಮಾ ಬಸವಂತಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 11 ಸಾವಿರ ದಿಂದ 12 ಸಾವಿರ ಹೊಸ ಎಚ್‍ಐವಿ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆಯಪ್‍ಗಳ ಮೂಲಕ ಅಪರಿಚಿತರೊಂದಿಗೆ ಸಂಪರ್ಕ ಹೊಂದುವ ಸಾಮಾಜಿಕ ನಡವಳಿಕೆಯಿಂದಾಗಿ ಸೋಂಕಿತರ ಸಂಪರ್ಕ ಪತ್ತೆ ಮಾಡುವುದು ಸವಾಲಾಗಿದೆ. ರಾಜ್ಯ ಸರಕಾರದ ಉಚಿತ ಚಿಕಿತ್ಸಾ ಯೋಜನೆಯಡಿ ಸದ್ಯ 23 ಸಾವಿರ ಜನರು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಶೇ.96 ರಷ್ಟು ಜನರಲ್ಲಿ ವೈರಸ್ ನಿಯಂತ್ರಣಕ್ಕೆ ಬಂದಿದ್ದು, ಇದರಿಂದ ಇತರರಿಗೆ ಸೋಂಕು ಹರಡುವ ಅಪಾಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಅಥವಾ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಅಧಿಕೃತ ಮಾಹಿತಿಯನ್ನು ಪರಿಶೀಲಿಸಬೇಕು. ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವುದನ್ನು ಮುಂದುವರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪದ್ಮಾ ಬಸವಂತಪ್ಪ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News