ರಾಜೀನಾಮೆ ಕೇಳಿದರೆ ತಕ್ಷಣವೇ ನೀಡುತ್ತೇನೆ, ಕುರ್ಚಿಗೆ ಅಂಟಿಕೊಳ್ಳುವ ವ್ಯಕ್ತಿ ನಾನಲ್ಲ : ಬಸವರಾಜ ಹೊರಟ್ಟಿ
ಹುಬ್ಬಳ್ಳಿ : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಕರೆ ಮಾಡಿದ್ದಾರೆ ಎಂಬ ಸುದ್ದಿ ಕೇವಲ ಗಾಳಿಸುದ್ದಿಯಷ್ಟೇ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಆರೋಗ್ಯ ವಿಚಾರಿಸಲು ದೂರವಾಣಿ ಕರೆ ಮಾಡಿದ್ದರು. ಆದರೆ ರಾಜೀನಾಮೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
"ರಾಜೀನಾಮೆ ಕೇಳಿದರೆ ನಾನು ತಕ್ಷಣವೇ ನೀಡುತ್ತೇನೆ. ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವ ವ್ಯಕ್ತಿ ನಾನು ಅಲ್ಲ. ಜುಲೈ 2028ರವರೆಗೆ ನನ್ನ ಅವಧಿ ಇದ್ದರೂ, ಹುದ್ದೆಗಾಗಿ ಅಂಟಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.
1956ರಿಂದ ಇಂದಿನವರೆಗೆ ಯಾವುದೇ ಸಭಾಪತಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದು, ಸರಕಾರ ಬದಲಾದ ಕಾರಣಕ್ಕೆ ಸಭಾಪತಿಯನ್ನು ಬದಲಿಸಿದ ಉದಾಹರಣೆ ಇಲ್ಲ. ಬಹುಮತ ಇದ್ದಾಗಲೂ ಸಭಾಪತಿ ಬದಲಾವಣೆ ನಡೆದಿಲ್ಲ ಎಂದು ಅವರು ನೆನಪಿಸಿದರು.
"ಇಲ್ಲಿಯವರೆಗೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಉದಾಹರಣೆಯೇ ಇಲ್ಲ. ಹಿಂದೆ ಸಭಾಪತಿ ಹುದ್ದೆ ಸ್ವೀಕರಿಸಲು ಎಲ್ಲರೂ ಹಿಂಜರಿಯುತ್ತಿದ್ದರು. ಈಗ ಏಕಾಏಕಿ ಈ ಹುದ್ದೆಯ ಮೇಲೆಯೇ ಎಲ್ಲರಿಗೂ ಆಸಕ್ತಿ ಮೂಡಿರುವುದು ಆಶ್ಚರ್ಯಕರ" ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನ ಇಬ್ಬರು ಸದಸ್ಯರು ಸಭಾಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಅವರೇ ರಾಜೀನಾಮೆ ಕುರಿತು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ ಹೊರಟ್ಟಿ, "ಅವರು ಸಭಾಪತಿ ಆಗುವುದಿಲ್ಲ" ಎಂದರು.
ನಾನು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ಸಭಾಪತಿ ಆಗುವ ಉದ್ದೇಶದಿಂದ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಬಳಿಕ ಈ ಕುರಿತು ಮಾತನಾಡೋಣ ಎಂದಿದ್ದರೂ, ಇದುವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದರು.
‘ಚಿಂತಕರ ಚಾವಡಿ’ ಎಂದೇ ಕರೆಯಲಾಗುವ ವಿಧಾನ ಪರಿಷತ್ತಿನಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಹೆಚ್ಚಾಗಿರುವ ಹಿನ್ನೆಲೆ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಇತ್ತೀಚಿಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತವನ್ನು ಹೊಂದಿದೆ. ಇದೇ ಕಾರಣದಿಂದಾಗಿ ವಿರೋಧ ಪಕ್ಷದ ಕೈಯಲ್ಲಿದ್ದ ವಿಧಾನ ಪರಿಷತ್(ಮೇಲ್ಮನೆ) ನಿಯಂತ್ರಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಆಡಳಿತರೂಢ ಕಾಂಗ್ರೆಸ್ ಪಕ್ಷವು ಇದೀಗ ಗಂಭೀರ ಹೆಜ್ಜೆ ಇಟ್ಟಿದೆ. ಒಂದು ವೇಳೆ ಹಾಲಿ ಸಭಾಪತಿ ಸ್ವಯಂ ರಾಜೀನಾಮೆಗೆ ಮುಂದಾಗದೆ ಇದ್ದರೆ, ಮುಂಬರುವ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.