ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಿ : ವಿ.ಸುನಿಲ್ ಕುಮಾರ್
ತುಂಬೆ ಅಣೆಕಟ್ಟು ಎತ್ತರ ಹೆಚ್ಚಿಸಲು ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಮನವಿ
ವೇದವ್ಯಾಸ ಕಾಮತ್/ವಿ.ಸುನಿಲ್ ಕುಮಾರ್
ಬೆಂಗಳೂರು : ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಲು ಸರಕಾರ ಮುಂದಾಗಬೇಕು ಎಂದು ಬಿಜೆಪಿ ಸದಸ್ಯ ವಿ.ಸುನಿಲ್ ಕುಮಾರ್ ಆಗ್ರಹಿಸಿದರು.
ಬುಧವಾರ ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯ ಅಗತ್ಯವಿದೆ. ಸಣ್ಣ ಹಳ್ಳುಗಳು, ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ತೆಗೆಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸೇರಿ ಈ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದೆ. ನೀರು ನಿಂತಿರುವಾಗಲೆ ನಾವು ಮರಳು ತೆಗೆಯಬೇಕು. ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಮಾತ್ರ ಇದು ಸಾಧ್ಯ ಎಂದು ಸುನಿಲ್ ಕುಮಾರ್ ತಿಳಿಸಿದರು.
ಗುಜರಾತ್ ರಾಜ್ಯದಲ್ಲಿ ನೀರಿನಲ್ಲಿ ಮುಳುಗಿ ಮರಳು ತೆಗೆಯಲು ಅನುಮತಿ ನೀಡಿದ್ದಾರೆ. ಆದರೆ, ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಮರಳು ತೆಗೆಯಲು ಹೋದರೆ ಸಿಆರ್‌ಝೆಡ್ ಎನ್ನುತ್ತಾರೆ. ಪ್ರತಿಯೊಂದಕ್ಕೂ ನಾವು ಪರಿಸರ ಎಂದು ಹೋದರೆ ಏನು ಮಾಡಲು ಆಗುವುದಿಲ್ಲ. ಆದುದರಿಂದ, ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಮಾಡಿ, ಹಳ್ಳಗಳಲ್ಲಿ ಸಂಗ್ರಹವಾಗಿರುವ ಮರಳು ತೆಗೆಯಲು ಅವಕಾಶ ನೀಡಿ ಎಂದು ಅವರು ಕೋರಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿಯಲ್ಲಿತ್ತು. ಅದರಡಿ, ಸಣ್ಣ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಆ ಯೋಜನೆ ಸ್ಥಗಿತವಾಗಿದೆ. ಸರಕಾರ ಕರಾವಳಿ ಭಾಗದಲ್ಲಿ ಎಷ್ಟು ಕಿಂಡಿ ಅಣೆಕಟ್ಟುಗಳಿವೆ, ಇನ್ನೂ ಎಷ್ಟು ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ, ನೀರು ನಿಲ್ಲಿಸಬಹುದು ಎಂಬುದರ ಬಗ್ಗೆ ವರದಿ ತರಿಸಿಕೊಳ್ಳಲಿ ಎಂದು ಸುನಿಲ್ ಕುಮಾರ್ ಹೇಳಿದರು.
ಬಿಜೆಪಿ ಸದಸ್ಯರ ಆಗ್ರಹಕ್ಕೆ ದನಿಗೂಡಿಸಿದ ಉಪಸಭಾಧ್ಯಕ್ಷ ಮಂಕಾಳ್ ವೈದ್ಯ, ನಮ್ಮ ಭಾಗದಲ್ಲಿ ದೊಡ್ಡ ನದಿಗಳು ಇಲ್ಲ. ಉಪ ನದಿಗಳು ಮಾತ್ರ ಇವೆ. ಅವುಗಳ ನೀರನ್ನು ನಿಲ್ಲಿಸಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದುದರಿಂದ, ಸರಕಾರ ಕಿಂಡಿ ಅಣೆಕಟ್ಟುಗಳ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರಾವಳಿ ಭಾಗದ ಜನಪ್ರತಿನಿಧಿಗಳು ಸೇರಿ ಈ ವಿಚಾರದಲ್ಲಿ ಒಂದು ಒಮ್ಮತದ ಅಭಿಪ್ರಾಯಕ್ಕೆ ಬಂದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದೆ ಬರಲಿದೆ ಎಂದರು.
ತುಂಬೆ ಅಣೆಕಟ್ಟು ಎತ್ತರ ಹೆಚ್ಚಿಸಲು ಬಿಜೆಪಿ ಸದಸ್ಯ ವೇದವ್ಯಾಸ್ ಕಾಮತ್ ಮನವಿ
ಬೆಂಗಳೂರು: ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತುಂಬೆ ಅಣೆಕಟ್ಟು ಎತ್ತರವನ್ನು ಹೆಚ್ಚಿಸಲು ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಸರಕಾರಕ್ಕೆ ಮನವಿ ಮಾಡಿದರು.
ಬುಧವಾರ ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಅವರು, ತುಂಬೆ ಅಣೆಕಟ್ಟಿನ ಎತ್ತರ 6 ಮೀಟರ್ ಇದೆ. ಅದರಲ್ಲಿ 2-3 ಮೀಟರ್ ಹೂಳು ತುಂಬಿಕೊಂಡಿದೆ ಎಂದು ಹೇಳಿದರು.
ಅಣೆಕಟ್ಟೆಯ ಎತ್ತರವನ್ನು ಒಂದು ಮೀಟರ್ ಹೆಚ್ಚಿಸಿದರೆ, ಮುಳುಗಡೆಯಾಗುವ ಗ್ರಾಮಗಳಿಗೆ ಸೂಕ್ತ ಪರಿಹಾರ ನೀಡಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಅಲ್ಲದೇ, ಸಮುದ್ರದ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ನೀಡಬೇಕು. ಸದ್ಯ ನಾವು ಕುಡಿಯುವ ನೀರನ್ನೆ ಕೈಗಾರಿಕೆಗಳಿಗೆ ನೀಡುತ್ತಿದ್ದೇವೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ಎಂ.ಆರ್.ಪಿ.ಎಲ್‍ನವರು 20 ಎಂ.ಎಲ್.ಡಿ ಸಮುದ್ರದ ನೀರನ್ನು ಶುದ್ಧೀಕರಿಸಿ ಬಳಕೆ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಸಂರಕ್ಷಣೆಗಾಗಿ ಸಮುದ್ರದ ನೀರನ್ನು ಶುದ್ಧೀಕರಿಸುವ ಸಂಬಂಧ ಸರಕಾರ ಗಮನ ಹರಿಸಬೇಕು ಎಂದು ಅವರು ಕೋರಿದರು.