ಬೆಂಗಳೂರು : ರಾಜ್ಯದಲ್ಲಿ ರೈತರಿಗೆ ಅನುಕೂಲವಾಗುವಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಸದ್ಯ ನೀಡಲಾಗುತ್ತಿರುವ 6 ಗಂಟೆಗಳ ವಿದ್ಯುತ್ ಪೂರೈಕೆಯನ್ನು ಮೂರ್ನಾಲ್ಕು ದಿನಗಳಲ್ಲಿ 7 ಗಂಟೆಗೆ ಹೆಚ್ಚಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯರು ಕೃಷಿ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಉತ್ತರಿಸಿದ ಸಚಿವರು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ವಿದ್ಯುತ್ ಬೇಡಿಕೆ ಹೆಚ್ಚಳ ಹಾಗೂ ಉತ್ಪಾದನೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಸದ್ಯ ಒಂದು ಗಂಟೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿದೆ ಎಂದರು.

ವಿದ್ಯುತ್ ಉತ್ಪಾದನೆ ಹಾಗೂ ಬೇಡಿಕೆಯ ಪರಿಸ್ಥಿತಿಯನ್ನು ಗಮನಿಸಿ, ಮೂರ್ನಾಲ್ಕು ದಿನಗಳಲ್ಲಿ ಹೆಚ್ಚುವರಿ ಒಂದು ಗಂಟೆ ವಿದ್ಯುತ್ ಪೂರೈಸುವ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಕೃಷಿ ಪಂಪ್‍ಸೆಟ್‌ ಗಳಿಗೆ ನಿಗದಿತ 7 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಜಾರ್ಜ್ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಜಲವಿದ್ಯುತ್ ಉತ್ಪಾದನೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯವಿದ್ದಷ್ಟು ವಿದ್ಯುತ್ ಹಣ ನೀಡಿ ಖರೀದಿಸಿ ರಾಜ್ಯದ ಬೇಡಿಕೆ ಪೂರೈಸಲಾಗುವುದು ಎಂದು ಜಾರ್ಜ್ ತಿಳಿಸಿದರು.

 

ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕಡಿವಾಣ: ಕೃಷಿ ಪಂಪ್‍ಸೆಟ್‍ಗಳಿಗೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಸಂಪರ್ಕಗಳಿಗೆ ಒಂದು ಟ್ರಾನ್ಸ್‌ ಫಾರ್ಮರ್ ನಿಗದಿಪಡಿಸಲಾಗಿದೆ. ಆದರೆ, ಹಲವು ರೈತರು ಅನುಮತಿ ಪಡೆಯದೇ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿರುವುದರಿಂದ ಟ್ರಾನ್ಸ್‌ ಫಾರ್ಮರ್‍ಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಪರಿಣಾಮವಾಗಿ ಅವು ಪದೇ-ಪದೇ ಹಾಳಾಗುತ್ತಿವೆ ಎಂದು ಸಚಿವ ಜಾರ್ಜ್ ಹೇಳಿದರು.

ಅಕ್ರಮ ವಿದ್ಯುತ್ ಸಂಪರ್ಕದಿಂದ ಟ್ರಾನ್ಸ್‌ ಫಾರ್ಮರ್‍ಗಳ ಮೇಲೆ ಉಂಟಾಗುತ್ತಿರುವ ಓವರ್‍ಲೋಡ್ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor