×
Ad

‘ಆರೋಗ್ಯ ಸಂಜೀವಿನಿ’: ಸರಕಾರಿ ನೌಕರರಿಗೆ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರಕಾರ ಆದೇಶ

Update: 2026-06-23 00:14 IST

ಬೆಂಗಳೂರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟ 40 ವರ್ಷ ಮೀರಿದ ಸರಕಾರಿ ನೌಕರರಿಗೆ ‘ವಾರ್ಷಿಕ ವೈದ್ಯಕೀಯ ತಪಾಸಣೆ' ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಆಧುನಿಕ ಜೀವನ ಶೈಲಿಯು ಒತ್ತಡದಿಂದ ಕೂಡಿರುವುದರಿಂದ ಆರೋಗ್ಯಕರ ಜೀವನ ನಡೆಸಲು ದೇಹಕ್ಕೆ ಬೇಕಾದ ವ್ಯಾಯಾಮದ ಕೊರತೆ ಇರುವುದರಿಂದ 40 ವರ್ಷ ವಯಸ್ಸು ಮೀರಿದ ಸರಕಾರಿ ನೌಕರರು ಸಾಮಾನ್ಯವಾಗಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಂದ ಬಳಲುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿರುವ ಅರಿವು ಇಲ್ಲದೇ ನೌಕರರು ಹೃದಯಾಘಾತ, ಪಾಶ್ರ್ವವಾಯು ಮುಂತಾದ ರೋಗಗಳಿಗೆ ಒಳಗಾಗುತ್ತಿದ್ದಾರೆ.

ಸೂಕ್ತ ಸಮಯದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಒಮ್ಮೆ ಕೆಲವು ಅಗತ್ಯ ಸಾಮಾನ್ಯ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಂಡಲ್ಲಿ ಆರಂಭದ ಹಂತದಲ್ಲಿ ಅವಶ್ಯಕ ಔಷದೋಪಚಾರಗಳನ್ನು ಪಡೆದು ಇಂತಹ ಗಂಭೀರ, ಅಪಾಯಕರ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಿ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸರಕಾರಿ ನೌಕರರಿಗೆ ಒದಗಿಸಲಾಗಿರುವ ‘ಮುನ್ನೆಚ್ಚರಿಕೆ ಆರೋಗ್ಯ ತಪಾಸಣೆ’ನ ಮಾದರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೂ ‘ವಾರ್ಷಿಕ ವೈದ್ಯಕೀಯ ತಪಾಸಣೆ’ ಸೌಲಭ್ಯವನ್ನು ಒದಗಿಸುವ ಬಗ್ಗೆ ಆರೋಗ್ಯ ಇಲಾಖೆಯ ಅಭಿಪ್ರಾಯ ಪಡೆದು ಪರಿಶೀಲಿಸಿ, ಕೆಎಎಸ್‍ಎಸ್ ಯೋಜನೆಯಡಿ ನೋಂದಣಿಯಾಗಿರುವ ಸರಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸೌಲಭ್ಯವನ್ನು ಪಡೆಯಲು ಕೆಲವು ಷರತ್ತುಗಳನ್ನು ಸೂಚಿಸಲಾಗಿದ್ದು, ಸ್ವ-ಇಚ್ಛೆಯಿಂದ ಯೋಜನೆಗೆ ಒಳಪಡದ ಸರಕಾರಿ ನೌಕರರು ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ. ವಾರ್ಷಿಕ ಆರೋಗ್ಯ ತಪಾಸಣೆ ಸರಕಾರಿ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಸರಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ. ಈ ತಪಾಸಣೆಗಳನ್ನು ಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬಹುದು. ಈ ತಪಾಸಣೆಗಳನ್ನು ಒಂದೇ ಸಂಸ್ಥೆಯಲ್ಲಿ ಪಡೆದು ಒಂದೇ ಕ್ಲೇಮಿನಲ್ಲಿ ಅವುಗಳನ್ನು ಇತ್ಯರ್ಥಪಡಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ನಿಗದಿಪಡಿಸಿರುವ ವಾರ್ಷಿಕ ವೈದ್ಯಕೀಯ ತಪಾಸಣೆಗಳಿಗೆ ಪುರುಷ ನೌಕರರಿಗೆ 2ಸಾವಿರ ರೂ., ಮಹಿಳಾ ನೌಕರರಿಗೆ 2,200ರೂ.ಸಂಚಿತ ದರಗಳನ್ನು ನಿಗದಿಪಡಿಸಲಾಗಿದೆ. ವಿವಿಧ ತಪಾಸಣೆಗಳಿಗೆ ಸರಕಾರ ನಿಗದಿಪಡಿಸಿದ ಗರಿಷ್ಠ ಮೊತ್ತದ ಮಿತಿಗೊಳಪಟ್ಟು ಮಂಜೂರಾತಿ ನೀಡಬೇಕು. ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು ಕೆಎಎಸ್‍ಎಸ್ ಯೋಜನೆಯಡಿ ಅಳವಡಿಸಿಕೊಳ್ಳಲು ಹಾಗೂ ಈ ಸಂಬಂಧ ನೋಂದಾಯಿತ ಖಾಸಗಿ ಆಸ್ಪತ್ರೆಗಳೊಂದಿಗೆ ಸೂಕ್ತ ಒಡಂಬಡಿಕೆಯನ್ನು ಮಾಡಿಕೊಳ್ಳಲು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಉಪ ಕಾರ್ಯದರ್ಶಿ ಎಸ್.ಆರ್.ಶಿವಶಂಕರ್ ಆದೇಶದಲ್ಲಿ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News