‘ಕಾರ್ಕಳ ಯಕ್ಷರಂಗಾಯಣದ ಹೆಸರು ಬದಲಾವಣೆ’: ಸಾಂಸ್ಕೃತಿಕ ಅಸ್ಮಿತೆಗೆ ಸರಕಾರದಿಂದ ದ್ರೋಹ ಎಂದ ಶಾಸಕ ವಿ.ಸುನಿಲ್ ಕುಮಾರ್
ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪನೆಗೊಂಡಿದ್ದ ‘ಯಕ್ಷರಂಗಾಯಣ’ ಕೇಂದ್ರದ ಹೆಸರನ್ನು ರಾಜ್ಯ ಸರಕಾರವು ಏಕಾಏಕಿ ‘ಕರಾವಳಿ ರಂಗಾಯಣ’ ಎಂದು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕ ಪಕ್ಷೀಯ ನಿರ್ಧಾರ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವವಿಖ್ಯಾತ ಯಕ್ಷಗಾನ ಮತ್ತು ನಾಟಕರಂಗದ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ದೂರದೃಷ್ಟಿಯೊಂದಿಗೆ ಕಾರ್ಕಳದಲ್ಲಿ ಯಕ್ಷರಂಗಾಯಣ ಸ್ಥಾಪನೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಹೆಸರು ಬದಲಿಸುವ ಈ ದಿಢೀರ್ ಮತ್ತು ದುರುದ್ದೇಶಪೂರಿತ ನಡೆ ಇಡೀ ಕರಾವಳಿಯ ಯಕ್ಷಗಾನ ಕಲೆಗೆ, ರಂಗಭೂಮಿಗೆ ಹಾಗೂ ಹಗಲಿರುಳು ಈ ಕಲೆಯನ್ನೆ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಇದು ಯಕ್ಷಗಾನ ಕಲೆಯ ಕತ್ತು ಹಿಸುಕುವ ರಾಜ್ಯ ಸರಕಾರದ ವ್ಯವಸ್ಥಿತ ಸಂಚು ಎಂದು ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಬಿಜೆಪಿ ಸರಕಾರದ ಆಡಳಿತದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಇಡೀ ಅವಿಭಜಿತ ಜಿಲ್ಲೆಯ ಅಸ್ಮಿತೆಯಾದ ಯಕ್ಷಗಾನ ಕಲೆಯನ್ನು ಯಕ್ಷಗಾನದ ಹೆಸರಲ್ಲೆ ಯುವ ಜನಾಂಗಕ್ಕೆ ಪರಿಚಯಿಸಬೇಕು ಎಂಬ ಆಶಯದಿಂದ ಯಕ್ಷರಂಗಾಯಣ ಆರಂಭಿಸಲಾಗಿತ್ತು. ಆ ಬಳಿಕ ಈ ಕೇಂದ್ರದಲ್ಲಿ ನಿರಂತರ ಯಕ್ಷಗಾನ, ನಾಟಕ ಕಲೆಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು, ಯುವ ಸಮೂಹ ಯಕ್ಷಗಾನ, ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಯಕ್ಷ ರಂಗಾಯಣದ ಕಟ್ಟಡ ನಿರ್ಮಾಣ ಇತ್ಯಾದಿಗಳಿಗೆ ಸುಮಾರು 2 ಕೋಟಿ ರೂ. ಮಂಜೂರಾಗಿ ಯಕ್ಷರಂಗಾಯಣ ಹೆಸರಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಆದರೆ, ಇವತ್ತು ಆ ಹೆಸರಿನಿಂದ ‘ಯಕ್ಷ’ ಎಂಬ ಪದವನ್ನೇ ಕಿತ್ತೊಗೆಯುವ ಮೂಲಕ ಸರಕಾರ ಯಾರ ಓಲೈಕೆಗೆ ನಿಂತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ‘ಯಕ್ಷಗಾನ’ದ ಹೆಸರನ್ನು ಸಾಂಸ್ಕøತಿಕ ಭೂಪಟದಿಂದಲೇ ಅಳಿಸಿ ಹಾಕಲು ಹೊರಟಿರುವ ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ? ಕಲೆಯ ಹೆಸರನ್ನು ಬದಲಿಸಲು ಸರಕಾರಕ್ಕೆ ಒತ್ತಡ ಹೇರಿದ ಆ ಅದೃಶ್ಯ ಶಕ್ತಿಗಳು ಯಾವುವು? ಎಂದು ಸುನಿಲ್ ಕುಮಾರ್ ಕೇಳಿದ್ದಾರೆ.
ಈ ಹಿಂದೆ ಬಿಜೆಪಿ ಅಧಿಕಾರ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗಿತ್ತು. ಯಕ್ಷಗಾನ ಸಮಾವೇಶ ಮೇಳ, ಹೀಗೆ ಹಲವು ವಿಧದ ಕಾರ್ಯಕ್ರಮ ಕೈಗೊಂಡು ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಲಾಗಿತ್ತು. ಆದರೇ ಈ ಸರಕಾರ ಆಡಳಿತಕ್ಕೆ ಬಂದ ಬಳಿಕ ಕಲೆಗೆ ಒಂದಲ್ಲ ಒಂದು ರೀತಿ ದ್ರೋಹ ಬಗೆಯುವ ಪ್ರಯತ್ನ ನಡೆಸುತ್ತಿದೆ. ಯಕ್ಷಗಾನ ಕಲೆಯನ್ನು ಕೂಡ ಈ ಸರಕಾರಕ್ಕೆ ಸಹಿಸಲಾಗುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕರಾವಳಿ ರಂಗಾಯಣ ಎಂದು ಹೆಸರು ಬದಲಿಸುವ ನಿರ್ಧಾರಕ್ಕೆ ಮುನ್ನ ಕರಾವಳಿ ಭಾಗದ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ, ಯಾರ ಗಮನಕ್ಕೂ ತಾರದೇ, ಸ್ಥಳೀಯರ ವಿಶ್ವಾಸ ಗಳಿಸದೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಯಕ್ಷಗಾನ ಎಂಬುದು ಕೇವಲ ಒಂದು ಪ್ರದರ್ಶನ ಕಲೆಯಲ್ಲ. ಅದು ಕರಾವಳಿಯ ರಕ್ತಗತವಾಗಿ ಬಂದಿರುವ ಭಾವುಕ ಸಾಂಸ್ಕೃತಿಕ ಅಸ್ಮಿತೆ. ಇಂತಹ ಕಲೆಯ ಗೌರವಕ್ಕೆ ಧಕ್ಕೆ ತಂದಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರಕಾರವು ತನ್ನ ಈ ಹಠಮಾರಿ ಮತ್ತು ವಿವೇಚನಾರಹಿತ ನಿರ್ಧಾರವನ್ನು ತಕ್ಷಣವೆ ಹಿಂಪಡೆಯಬೇಕು. ರಾಜಕೀಯ ದುರುದ್ದೇಶಗಳನ್ನು ಬದಿಗಿಟ್ಟು, ಕೇಂದ್ರಕ್ಕೆ ‘ಯಕ್ಷರಂಗಾಯಣ’ ಎಂಬ ಮೂಲ ಹೆಸರನ್ನೇ ಉಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರಕಾರ ಒಂದು ವೇಳೆ ತನ್ನ ಪಟ್ಟನ್ನು ಸಡಿಲಿಸದೆ ಹೋದರೆ, ಅವಿಭಜಿತ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಯಕ್ಷಗಾನ ಅಭಿಮಾನಿಗಳ ಮೇಳಗಳ ಕಲಾವಿದರು ಹಾಗೂ ರಂಗದ ದಿಗ್ಗಜರ ತೀವ್ರ ವಿರೋಧವನ್ನು ಎದುರಿಸಬೇಕಾದಿತು ಎಂದು ಸುನಿಲ್ ಕುಮಾರ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.