×
Ad

ಮುಂದಿನ ತಿಂಗಳು ʼಇಂದಿರಾ ಕಿಟ್ʼ ನೀಡಲು ಸಿದ್ಧತೆ : ಕೆ.ಎಚ್.ಮುನಿಯಪ್ಪ

Update: 2026-05-09 19:11 IST

ಬೆಂಗಳೂರು, ಮೇ 9: ಅನ್ನಭಾಗ್ಯ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ನೀಡುವ ಕುರಿತು ಈಗಾಗಲೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ, ಟೆಂಡರ್ ಕರೆಯಲಾಗಿದೆ. ಬಹುತೇಕ ಮುಂದಿನ ತಿಂಗಳಿನಿಂದ ಇಂದಿರಾ ಕಿಟ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 6 ಸಾವಿರ ಕೋಟಿ ರೂ.ಗಳ ಟೆಂಡರ್ ಇದಾಗಿದೆ. ಹೆಚ್ಚು ಜನ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಉದ್ದೇಶ. ಬಹುತೇಕ ಈ ವಾರದಲ್ಲಿ ಯಾರು ಅರ್ಹ ಬಿಡ್ ದಾರರಿರುತ್ತಾರೋ ಅವರಿಗೆ ಟೆಂಡರ್ ಕೊಡುತ್ತೇವೆ ಎಂದು ಹೇಳಿದರು.

ವಾಣಿಜ್ಯ ಸಿಲಿಂಡರ್ ಸಮಸ್ಯೆ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಸೌಹಾರ್ದಯುತವಾಗಿ ಸಂಬಂಧ ಮುಂದುವರೆಸಿದ್ದರೆ ತೈಲ, ಅನಿಲದ ಸಮಸ್ಯೆಯಾಗುತ್ತಿರಲಿಲ್ಲ. ಇಂದು ಹೊಟೇಲ್ ಮಾಲಕರು ಲಕ್ಷಾಂತರ ರೂ.ಸಾಲ ಪಡೆದು ಸಮಸ್ಯೆಗೆ ಸಿಲುಕುವಂತಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿ ಬಂದು ಕೆಲಸ ಮಾಡುವ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮುನಿಯಪ್ಪ ಹೇಳಿದರು.

ಬಿಜೆಪಿ ಸರಕಾರ ಮುಂದಾಲೋಚನೆಯಿಲ್ಲದೆ ಕೆಲಸ ಮಾಡುತ್ತಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧ ದೀರ್ಘಕಾಲ ಮುಂದುವರೆಯುವ ಸೂಚನೆ ಇದ್ದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ನಾವು ನಮ್ಮ ರಾಜ್ಯದಲ್ಲಿ ಲಭ್ಯವಿರುವ ಅನಿಲ ಸಿಲಿಂಡರ್‍ಗಳನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

ವಾಣಿಜ್ಯ ಅನಿಲ ಸಿಲಿಂಡರ್‍ಗಳನ್ನು ದುರುಪಯೋಗ ಮಾಡುವವರ ಮೇಲೆ ದಾಳಿ ಮಾಡಿ, ಪ್ರಕರಣಗಳನ್ನು ದಾಖಲು ಮಾಡಿದ್ದೇವೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ನಾನು ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪತ್ರ ಬರೆದು ರಾಜ್ಯದಲ್ಲಿನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ಮುನಿಯಪ್ಪ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News