×
Ad

ಶೃಂಗೇರಿ ಮರು ಮತ ಎಣಿಕೆ ಗೊಂದಲ | ಮುಂದುವರಿದ ಆಣೆ ಪ್ರಮಾಣ; ಕಾಂಗ್ರೆಸ್‌ ಅಭ್ಯರ್ಥಿ ರಾಜೇಗೌಡ, ಚುನಾವಣಾ ಏಜೆಂಟ್ ಸುಧೀರ್ ಕುಮಾರ್‌ರಿಂದ ದೇವಾಲಯದಲ್ಲಿ ಪ್ರಮಾಣ

Update: 2026-05-09 13:06 IST

ಚಿಕ್ಕಮಗಳೂರು, ಮೇ 9 : 2023ರಲ್ಲಿ ನಡೆದ ಶೃಂಗೇರಿ ವಿಧಾನಸಭೆ ಕ್ಷೇತ್ರದ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಶಾಸಕರಾಗಿ ಆಯ್ಕೆಯಾದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದ್ದು, ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಮರು ಮತ ಎಣಿಕೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ಮಧ್ಯೆ ಶೃಂಗೇರಿ ಕ್ಷೇತ್ರದಲ್ಲಿ ಮತ ಎಣಿಕೆ ಸಂದರ್ಭ ಏಜೆಂಟ್‍ಗಳಾಗಿದ್ದವರು ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಲು ಮುಂದಾಗಿದ್ದಾರೆ.

ಶುಕ್ರವಾರ ಬಿಜೆಪಿ ಅಭ್ಯರ್ಥಿ ಜೀವರಾಜ್ ಪರ ಚುನಾವಣಾ ಏಜೆಂಟ್‍ಗಳಾಗಿದ್ದ ರಾಮಸ್ವಾಮಿ ಮತ್ತು ಅದ್ದಡ ಸತೀಶ್ ಎಂಬವರು ಕೊಪ್ಪ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದ ಮುಂದೆ ಪ್ರಮಾಣ ಮಾಡಿ, 2023ರಲ್ಲಿ ಶೃಂಗೇರಿ ವಿಧಾನಸಭೆ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಸಂದರ್ಭ ಮತ ಎಣಿಕೆ ವೇಳೆ ಯಾವುದೇ ಲೋಪವಾಗಿಲ್ಲ, ಎಣಿಕೆ ಪ್ರಕ್ರಿಯೆ ಪಾರರ್ದಕವಾಗಿ ನಡೆದಿದೆ. ನಾವು ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಪಡೆದು ಅಕ್ರಮ ಎಸಗಿದ್ದೇವೆ ಎಂಬ ಆರೋಪ ಕೇಳಿ ಬಂದಿದ್ದು, ಈ ಆರೋಪ ಸುಳ್ಳು, ನಾವು ತಪ್ಪು ಮಾಡಿದ್ದರೇ ದೇವರು ನಮಗೆ ಶಿಕ್ಷೆ ನೀಡಬೇಕು, ತಪ್ಪು ಮಾಡದಿದ್ದಲ್ಲಿ ಆರೋಪ ಮಾಡಿದವರನ್ನು ಆ ದೇವರೇ ನೋಡಿಕೊಳ್ಳಲಿ ಎಂದು ಪ್ರಮಾಣ ಮಾಡಿದ್ದರು.

ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಏಜೆಂಟ್ ಆಗಿದ್ದ ಸುಧೀರ್‌ ಕುಮಾರ್ ಮುರೊಳ್ಳಿ ಇದೇ ವೀರಭದ್ರಸ್ವಾಮಿ ದೇವಾಲಯದ ಮುಂದೆ ಪ್ರಮಾಣ ಮಾಡಿದ್ದು, ನಾನು 2023, ಮೇ 13ರಂದು ನಡೆದ ಮತ ಎಣಿಕೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಪರ ಚುನಾವಣಾ ಏಜೆಂಟ್ ಆಗಿದ್ದು, ಈ ವೇಳೆ ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ನಾನಲ್ಲದೇ ಬಿಜೆಪಿ, ಜೆಡಿಎಸ್, ಬಿಎಸ್ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ಏಜೆಂಟ್‍ಗಳೂ ಕೂಡ ಮತ ಎಣಿಕೆ ಕೇಂದ್ರದಲ್ಲಿದ್ದು, ಪ್ರತೀ ಮತ ಎಣಿಕೆಯನ್ನೂ ಕಣ್ಣಾರೆ ಕಂಡಿದ್ದಾರೆ. ಅಂಚೆ ಮತಗಳ ಎಣಿಕೆ ಸಂದರ್ಭ ತಿರಸ್ಕೃತ ಮತಗಳು ಹಾಗೂ ಜೀವರಾಜ್, ರಾಜೇಗೌಡ ಅವರ ಪರ ಬಂದಿದ್ದ ಸಿಂದು ಮತಗಳನ್ನೂ ವೀಕ್ಷಿಸಿದ್ದಾರೆ. ಮತ ಎಣಿಕೆ ಬಳಿಕ ಎಲ್ಲ ಏಜೆಂಟರು ಮತ ಎಣಿಕೆ ಪಾರದರ್ಶಕವಾಗಿ ನಡೆದಿರುವ ಬಗ್ಗೆ ಸಹಿಯನ್ನೂ ಮಾಡಿದ್ದಾರೆ.

ಆದರೆ ಕಳೆದ ಮೇ 2ರಂದು ನಡೆದ ಮರು ಮತ ಎಣಿಕೆ ವೇಳೆ ರಾಜೇಗೌಡ ಪರ ಬಂದಿದ್ದ ಸಿಂಧು ಮತಗಳು ಅಸಿಂಧು ಆಗಿದ್ದವು, ಸಿಂಧುವಾಗಿದ್ದ 257 ಮತಗಳಿಗೆ ಡಬಲ್ ರೈಟ್ ಮಾರ್ಕ್ ಹಾಕಿ ಅಸಿಂಧುಗೊಳಿಸಲಾಗಿತ್ತು. ಅಲ್ಲದೇ ಮತ ಪತ್ರಗಳಿದ್ದ ಕವರ್‌ ಗಳ ಸೀಲ್‍ಗಳು ಒಡೆದಿದ್ದು, ಇದು ಬಿಜೆಪಿ ಅಭ್ಯರ್ಥಿ ಜೀವರಾಜ್ ಹಾಗೂ ಅವರ ಸಹಚರರು ಮಾಡಿದ ಅಕ್ರಮವಾಗಿದೆ. ಈ ಸಂಬಂಧ ತಾನು ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದೇನೆ. ಪಕ್ಷದಿಂದ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ರಾಜೇಗೌಡ ಪರ ಸಿಂಧುವಾಗಿದ್ದ ಅಂಚೆ ಮತಗಳಿಗೆ ಡಬಲ್ ರೈಟ್ ಮಾರ್ಕ್ ಟಿಕ್ ಹಾಕಿ ಅಸಿಂಧುಗೊಳಿಸಲಾಗಿದ್ದು, ಇದು ಜೀವರಾಜ್ ಹಾಗೂ ಅವರ ಸಹಚರರ ಕೃತ್ಯವಾಗಿದೆ ಎಂದು ಅವರು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.

ತಪ್ಪು ಮಾಡಿದ್ದರೆ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆಂದು ಪ್ರಮಾಣ ಮಾಡಿದ ರಾಜೇಗೌಡ: 2023ರ ಚುನಾವಣೆ ಫಲಿತಾಂಶದಲ್ಲಿ ತಾನು ಜಯಶೀಲನಾಗಿದ್ದು, ಮರು ಮತ ಎಣಿಕೆ ವೇಳೆ ನನಗೆ ಬಂದಿದ್ದ ಸಿಂಧುವಾಗಿದ್ದ 257 ಮತಗಳನ್ನು ಅಸಿಂಧುಗೊಳಿಸುವ ಮೂಲಕ ನನ್ನನ್ನು ಸೋಲಿಸಲಾಗಿದೆ. ಇದು ಸಂವಿಧಾನದ ಕಗ್ಗೊಲೆಯಾಗಿದೆ. ತನಗೆ ಮರು ಮತ ಎಣಿಕೆ ವೇಳೆ ಅನ್ಯಾಯವಾಗಿದೆ. ಮತ ತಿರುಚಿ ಮೋಸ ಮಾಡಿರುವವರಿಗೆ ಶಿಕ್ಷೆಯಾಗಬೇಕು, ತಲೆ ದಂಡಯಾಗಬೇಕು, ನಾವೇ ತಪ್ಪು ಮಾಡಿದ್ದರೂ ದಂಡನೆಯಾಗಬೇಕು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನಿಂದ ತಪ್ಪಾಗಿದ್ದರೆ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಇದೇ ವೇಳೆ ಮಾಜಿ ಶಾಸಕ ಟಿ.ಡಿ.ರಾಜೇಗೌಡ ಪ್ರಮಾಣ ಮಾಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News