SIR ಕರಡು ಪಟ್ಟಿಯಲ್ಲಿ ಭಾರೀ ಲೋಪ ಆರೋಪ: ಚುನಾವಣಾ ಆಯೋಗಕ್ಕೆ ಬಿ.ಕೆ. ಹರಿಪ್ರಸಾದ್ ಪತ್ರ
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಬಿಡುಗಡೆಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕರಡು ಪಟ್ಟಿಯಲ್ಲಿ ಲೋಪಗಳು ಹಾಗೂ ನಿರಂಕುಶ ಕ್ರಮಗಳು ಕಂಡುಬಂದಿದ್ದು, ಈ ಸಂಬಂಧ ಗಂಭೀರ ದೋಷಗಳನ್ನು ಸರಿಪಡಿಸದ ಹೊರತು ಪ್ರಕ್ರಿಯೆಯನ್ನು ಆತುರವಾಗಿ ಯಾವುದೇ ಕಾರಣಕ್ಕೂ ಮುಕ್ತಾಯಗೊಳಿಸಬಾರದು ಎಂದು ಒತ್ತಾಯಿಸಿ ರಾಜ್ಯ ಚುನಾವಣಾ ಆಯೋಗಗಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪತ್ರ ಬರೆದಿದ್ದಾರೆ.
ಎಸ್‍ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಸೇರ್ಪಡೆ ಅಥವಾ ತಿದ್ದುಪಡಿಗಳು ಆಗಿವೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಎರಡೂ ಪಟ್ಟಿಗಳಲ್ಲಿ ಮತದಾರರ ಒಟ್ಟು ಸಂಖ್ಯೆ ಒಂದೇ ಆಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದಲ್ಲದೆ, 2025ರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳು ಮತ್ತು 2026ರ ಎಎಸ್‍ಡಿಡಿಒ ಅಂಕಿ-ಅಂಶಗಳಲ್ಲಿ ಸ್ಪಷ್ಟ ಹೊಂದಾಣಿಕೆಯಿಲ್ಲದೆ ಗಂಭೀರ ವ್ಯತ್ಯಾಸಗಳಿದ್ದು, ಇವುಗಳನ್ನು ಕ್ಷೇತ್ರವಾರು ಮರುಪರಿಶೀಲನೆ ನಡೆಸಿ ಸರಿಪಡಿಸಬೇಕಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರಡು ಪಟ್ಟಿಯಿಂದ ಹೊರಗುಳಿದ ಮತದಾರರ ಹೆಸರುಗಳು 2025ರ ಪಟ್ಟಿಯ ಸಂಬಂಧಪಟ್ಟ ಬೂತ್‍ಗಳಲ್ಲಿ ಕಾಣಿಸುತ್ತಿಲ್ಲದಿರುವುದು ಗಂಭೀರ ತಾಂತ್ರಿಕ ದೋಷವಾಗಿದೆ. ಜತೆಗೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮತಗಟ್ಟೆಗಳನ್ನು (ಬೂತ್) ಸ್ಥಳಾಂತರ ಮಾಡಲಾಗಿದೆ. ಈ ಹಠಾತ್ ಬದಲಾವಣೆಯಿಂದಾಗಿ ಫಾರ್ಮ್-20 ವಿಶ್ಲೇಷಣೆ ಮತ್ತು ಬೂತ್‍ವಾರು ಹೋಲಿಕೆ ಮಾಡುವುದು ಕಷ್ಟಕರವಾಗಿದ್ದು, ಆಯೋಗವು ಹಳೆಯ ಮತ್ತು ಹೊಸ ಬೂತ್‍ಗಳ ಮ್ಯಾಪಿಂಗ್ ವಿವರ ಹಾಗೂ ಸ್ಥಳಾಂತರಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಹಿಂದೆ ಬೆಟ್ಟು ಮಾಡಿದ್ದ ಮಹದೇವಪುರ ವಿಧಾನಸಭಾ ಕ್ಷೇತ್ರದ ಕರಡು ಪಟ್ಟಿಯಲ್ಲಿ ಈಗಲೂ ‘0' (ಶೂನ್ಯ) ಮನೆ ಸಂಖ್ಯೆಗಳು ಮುಂದುವರಿದಿರುವುದು ಪರಿಷ್ಕರಣೆಯ ಕಳಪೆ ಗುಣಮಟ್ಟವನ್ನು ಎತ್ತಿ ತೋರಿಸುತ್ತಿದೆ. ಇದರೊಂದಿಗೆ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ 2025ರ ಕೆಲವು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪಿಡಿಎಫ್‍ಗಳು ಲಭ್ಯವಿಲ್ಲದಿರುವುದರಿಂದ ಪರಿಶೀಲನಾ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಎಸ್‍ಡಿಡಿಒ ಅಂಕಿ-ಅಂಶಗಳ ಪ್ರಕಾರ ಸುಮಾರು 1.08 ಕೋಟಿ ಮತದಾರರನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ವರದಿಗಳಿದ್ದು, ಮ್ಯಾಪಿಂಗ್ ಮತ್ತು ತಾರ್ಕಿಕ ಲೋಪಗಳಿಂದಾಗಿ ಇನ್ನೂ 44 ಲಕ್ಷ ಮತದಾರರ ವಿವರಗಳಲ್ಲಿ ಗೊಂದಲವಿದೆ. ನೈಜ ಮತದಾರರ ಪರವಾಗಿ ಕುಟುಂಬದ ರಕ್ತಸಂಬಂಧಿಗಳು ಹಾಜರಾಗಲು ಅನುಮತಿ ನೀಡುವ ವಿಚಾರದಲ್ಲೂ ಆಯೋಗ ವಿಪರೀತ ವಿಳಂಬ ಧೋರಣೆ ತಳೆದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಕರ್ನಾಟಕದ ಎಸ್‍ಐಆರ್ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನಿಖರತೆಯ ಮೇಲೆ ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ. ಕೇವಲ ನಿಗದಿತ ಸಮಯದ ಗಡುವನ್ನು ಪೂರೈಸುವ ಸಲುವಾಗಿ ಆತುರಾತುರವಾಗಿ ಪ್ರಕ್ರಿಯೆ ಮುಗಿಸಿ ನೈಜ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸಬಾರದು ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಪತ್ರದಲ್ಲಿ ಪ್ರಸ್ತಾಪಿಸಲಾದ ಪ್ರತಿಯೊಂದು ಅಂಶಕ್ಕೂ ಯುದ್ಧೋಪಾದಿಯಲ್ಲಿ ಲಿಖಿತ ರೂಪದ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಅವರು ಆಗ್ರಹಿಸಿದ್ದಾರೆ.