×
Ad

ಮುಸ್ಲಿಂ ಪ್ರೇಮಿಯೊಂದಿಗೆ ವಾಸ | ಯುವತಿಯ ಮಾನಸಿಕ ಪರೀಕ್ಷೆ ಕೋರಿದ್ದ ತಾಯಿಯ ಅರ್ಜಿ ತಳ್ಳಿ ಹಾಕಿದ ಹೈಕೋರ್ಟ್

"ಹೆತ್ತವರು ನನ್ನನ್ನು ಆರೆಸ್ಸೆಸ್ ನ ಸದಸ್ಯರನ್ನು ಭೇಟಿ ಮಾಡಿಸಿ ಪತ್ರ ಬರೆಯಿಸಿದ್ದರು" ಎಂದ ಮಗಳು

Update: 2026-05-21 15:26 IST

(Photo credit: PTI)

ಬೆಂಗಳೂರು: ಮುಸ್ಲಿಂ ಯುವಕನೊಂದಿಗೆ ಸ್ವಇಚ್ಛೆಯಿಂದ ವಾಸಿಸುತ್ತಿರುವ 21 ವರ್ಷದ ಸಿಖ್ ಯುವತಿಯ ಮಾನಸಿಕ ಆರೋಗ್ಯ ಮೌಲ್ಯಮಾಪನ ನಡೆಸುವಂತೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಯುವತಿಯ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದ ರಾಜು ಹಾಗೂ ಕೆ. ಮನ್ಮಥ ರಾವ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿತು.

ಪ್ರಾಪ್ತವಯಸ್ಕಳಾದ ಯುವತಿ, ತಾನು ಸ್ವಇಚ್ಛೆಯಿಂದಲೇ ಪ್ರಿಯತಮನೊಂದಿಗೆ ವಾಸಿಸುತ್ತಿದ್ದೇನೆ ಎಂದು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದ್ದಾಳೆ. ಹೀಗಾಗಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತದ ಮಾನಸಿಕ ಆರೋಗ್ಯ ಪರೀಕ್ಷೆಗೆ ಆದೇಶಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.

‘ಯಾರೋ ಒಬ್ಬರು ಮನವಿ ಮಾಡಿದ್ದಾರೆ ಎಂಬ ಕಾರಣಕ್ಕೆ ಯಾರನ್ನಾದರೂ ಮಾನಸಿಕ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಅಂತಹ ಪರೀಕ್ಷೆಗೆ ಮಾನಸಿಕ ಆರೋಗ್ಯ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅದನ್ನು ಬಿಟ್ಟು ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಲಾಗದು’ ಎಂದು ಪೀಠ ತಿಳಿಸಿತು.

ಅರ್ಜಿದಾರರ ಮನವಿಯಂತೆ ಯುವತಿಯ ಮಾನಸಿಕ ಸ್ಥಿತಿಗತಿಯ ಮೌಲ್ಯಮಾಪನಕ್ಕೆ ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ವಿಚಾರಣೆ ವೇಳೆ ಯುವತಿ, ‘ನನ್ನ ಮೇಲೆ ಪೋಷಕರು ಒತ್ತಡ ಹೇರಿದ್ದರು. ಅದರಂತೆ ನಾನು ಪ್ರಿಯತಮನ ವಿರುದ್ಧ ಅತ್ಯಾಚಾರ ಹಾಗೂ ಮತಾಂತರ ಆರೋಪಗಳನ್ನು ಮಾಡಿ ಪತ್ರ ಬರೆದಿದ್ದೆ. ತಂದೆ–ತಾಯಿ ನನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕೆಲ ಸದಸ್ಯರನ್ನು ಭೇಟಿ ಮಾಡಿಸಿ ಆ ಪತ್ರ ಬರೆಯಿಸಿದ್ದರು. ಆ ಪತ್ರದಲ್ಲಿರುವ ಯಾವುದೇ ಆರೋಪವೂ ಸತ್ಯವಲ್ಲ. ನಾನು ಮತಾಂತರವಾಗಿಲ್ಲ. ನನ್ನ ಮೇಲೆ ಅತ್ಯಾಚಾರವೂ ಆಗಿಲ್ಲ. ಬೆದರಿಕೆ ಹಾಕಿ ಪತ್ರ ಬರೆಯುವಂತೆ ಮಾಡಿದ್ದರು’ ಎಂದು ಹೇಳಿಕೆ ನೀಡಿದಳು.

ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ‘ಯುವತಿ ಪ್ರಾಪ್ತವಯಸ್ಕಳಾಗಿದ್ದು, ತನ್ನ ಪ್ರಿಯತಮನೊಂದಿಗೆ ಸ್ವಇಚ್ಛೆಯಿಂದ ವಾಸಿಸಲು ಬಯಸಿರುವುದಾಗಿ ತಿಳಿಸಿದ್ದಾರೆ. ಅರ್ಜಿದಾರರು ಮಾಡಿರುವ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಯುವತಿ ತನ್ನ ಸ್ವಇಚ್ಛೆಯಿಂದ ಪ್ರೇಮಿಯೊಂದಿಗೆ ವಾಸಿಸುತ್ತಿದ್ದಾರೆ’ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ಸಿಖ್ ಧರ್ಮಕ್ಕೆ ಸೇರಿದ ತಾಯಿ, ತನ್ನ ಪುತ್ರಿ ಮುಸ್ಲಿಂ ಯುವಕನೊಂದಿಗೆ ವಾಸಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಾಯಿಯ ಪರ ವಕೀಲರು, ‘ಅರ್ಜಿದಾರರ ಪುತ್ರಿ ಈ ಹಿಂದೆ ಥೆರಪಿ ಹಾಗೂ ಮಾನಸಿಕ ಅನಾರೋಗ್ಯ ಚಿಕಿತ್ಸೆಗೆ ಒಳಗಾಗಿದ್ದರು. ನಿಮ್ಹಾನ್ಸ್ ಆಸ್ಪತ್ರೆಯ ದಾಖಲೆಗಳ ಪ್ರಕಾರ ಆಕೆಗೆ ಥೆರಪಿ ಮುಂದುವರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಮುಸ್ಲಿಂ ಯುವಕನೊಂದಿಗೆ ವಾಸಿಸಲು ಆಕೆ ನೀಡಿರುವ ಒಪ್ಪಿಗೆ ಸ್ವಯಂಪ್ರೇರಿತವಾಗಿದೆಯೇ ಅಥವಾ ಬಲವಂತದಿಂದಾಗಿದೆಯೇ ಎಂಬುದನ್ನು ತಿಳಿಯಲು ಮಾನಸಿಕ ಆರೋಗ್ಯ ಮೌಲ್ಯಮಾಪನ ಅಗತ್ಯ’ ಎಂದು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News