ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಮೌಲಾನ ಅಬುಲ್ ಕಲಾಂ ಅಝಾದ್ ಹೆಸರು ನಾಮಕರಣ: ಸಚಿವ ಬಸವರಾಜ ರಾಯರೆಡ್ಡಿ
ರಾಷ್ಟ್ರೀಯ ಶಿಕ್ಷಣ ದಿನ–2026 ಉದ್ಘಾಟನೆ, ಗಣ್ಯರಿಗೆ ಸನ್ಮಾನ
ಬೆಂಗಳೂರು : ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಮೌಲಾನ ಅಬುಲ್ ಕಲಾಂ ಅಝಾದ್ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಜನ್ಮಜಯಂತಿ ಆಚರಣೆ ಹಾಗೂ ರಾಷ್ಟ್ರೀಯ ಶಿಕ್ಷಣ ದಿನ–2026 ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಮೌಲಾನ ಅಬುಲ್ ಕಲಾಂ ಅಝಾದ್ ಅವರ ನೆನಪು ಸದಾ ಉಳಿಯಬೇಕು. ಹೀಗಾಗಿ, ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಅವರ ಹೆಸರು ಇಡಲಾಗುವುದು. ಈ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಪೈಕಿ ಮುಸ್ಲಿಮರ ಶಿಕ್ಷಣ ಪ್ರಮಾಣ ತೀರ ಕಡಿಮೆ ಇದೆ. ಇದನ್ನು ಹೆಚ್ಚಳ ಮಾಡಲು ನಾನು ಸಚಿವನಾಗಿ ಪಣತೊಟ್ಟಿದ್ದೇನೆ. ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಮೌಲಾನಾ ಅಬುಲ್ ಕಲಾಂ ಅಝಾದ್ ಅವರು ಶ್ರೇಷ್ಠ ದೇಶ ಭಕ್ತ. ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿದರೆ ಅದು ಮಹಾ ಪಾಪದ ಕೆಲಸ. ಇಂದು ಎಲ್ಲವೂ ಜಾತಿ, ಧರ್ಮದ ನೋಟದಲ್ಲಿ ಗುರುತಿಸುತ್ತಿರುವುದು ಬೇಸರ ಸಂಗತಿ. ಆದರೆ ಮೌಲಾನಾ ಅಬುಲ್ ಕಲಾಂ ಎಲ್ಲರಿಗೂ ಸೇರಿದ ಮಹಾನ್ ಸಾಧಕ ಎಂದು ಹೇಳಿದರು.
ಇಂದು ನಾವು ಓದುತ್ತಿರುವ ಐಐಟಿ ನಮ್ಮ ವಿಶ್ವವಿದ್ಯಾಲಯಗಳು ಎಲ್ಲವೂ ಅವರ ಕನಸಿನ ಫಲ. ಒಂದು ಮಾತಿನಲ್ಲಿ ಹೇಳಬೇಕೆಂದರೆ ಅವರು ಕಟ್ಟಡಗಳನ್ನು ಕಟ್ಟಲಿಲ್ಲ, ಅವರು ಭಾರತದ ಭವಿಷ್ಯವನ್ನು ಕಟ್ಟಿದರು. ಇನ್ನೊಂದು ಮುಖ್ಯ ವಿಷಯ - ಅವರು ಹಿಂದೂ-ಮುಸ್ಲಿಂ ಏಕತೆಗೆ ಜೀವನವನ್ನೇ ಮೀಸಲಿಟ್ಟರು. ನಾವು ಮೊದಲು ಭಾರತೀಯರು ಎಂಬುದು ಅವರ ಸಂದೇಶ ಎಂದು ನುಡಿದರು.
ಎಐ ಪಠ್ಯಕ್ರಮ ಜಾರಿ
ಪ್ರಾಸ್ತಾವಿಕ ಮಾತುಗಳನ್ನಾಡಿದ ಅಲ್ಪಸಂಖ್ಯಾತರ ಕಲ್ಯಾಣ,ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್, ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ಪಠ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಈಗಿನ ಕಾಲ ಬದಲಾಗಿದೆ. ಮುಂದಿನ ಭವಿಷ್ಯ ಎಲ್ಲವನ್ನೂ ಕೃತಕ ಬುದ್ಧಿಮತ್ತೆ(ಎಐ) ಒಳಗೊಳ್ಳಲಿದೆ. ಹಾಗಾಗಿ, ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ಪಠ್ಯಕ್ರಮ ಜಾರಿಗೊಳಿಸಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.
ಒಂದು ರಾಷ್ಟ್ರದ ಪ್ರಮುಖ ಶಕ್ತಿ, ಸಂಪತ್ತು ಎಂದರೆ ಅದು ಶಿಕ್ಷಣ ಮಾತ್ರ. ಇಂತಹ ಶಿಕ್ಷಣ ಕ್ಷೇತ್ರಕ್ಕೆ ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಅಪಾರ ಕೊಡುಗೆ ನೀಡಿದ್ದಾರೆ.ಅವರ ಮಾರ್ಗ ದರ್ಶನದಲ್ಲಿ ಶಿಕ್ಷಣ ಕ್ರಾಂತಿಯೇ ಆಗಿದೆ ಎಂದು ಅವರು ನುಡಿದರು.
ಈ ದೇಶದ ರಾಜಕಾರಣಿಗಳಿಂದ ಅಥವಾ ಬಲಿಷ್ಟ ವಾಣಿಜ್ಯೋದ್ಯಮಿಗಳಿಂದ, ಸರಕಾರಿ ಅಧಿಕಾರಿಗಳಿಂದ ವಿಶ್ವದ ನಂಬರ್ ಓನ್ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ. ಆದರೆ, ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಮಾತ್ರ ಸಾಧ್ಯ. ಅವರ ಕೊಡುಗೆ ದೇಶಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಮಾತನಾಡಿ, ಆಝಾದ್ ಅವರು ಕೇವಲ ಒಬ್ಬ ನಾಯಕರಲ್ಲ, ಒಬ್ಬ ದೂರದರ್ಶಿ. ಅವರಿಗೆ ಚೆನ್ನಾಗಿ ಗೊತ್ತಿತ್ತು "ಒಂದು ದೇಶ ಉದ್ಧಾರವಾಗಬೇಕಾದರೆ, ಮೊದಲು ಅದರ ಶಿಕ್ಷಣ ಉದ್ಧಾರವಾಗಬೇಕು" ಎಂದು.
ಅವರು ಶಿಕ್ಷಣ ಸಚಿವರಾಗಿದ್ದಾಗ ಭಾರತದಲ್ಲಿ ಏನೂ ಇರಲಿಲ್ಲ. ಶಾಲೆಗಳಿರಲಿಲ್ಲ, ಕಾಲೇಜುಗಳಿರಲಿಲ್ಲ. ಅಂತಹ ಸಮಯದಲ್ಲಿ ಅವರು ಐಐಟಿ, ಯುಜಿಸಿ, ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ ಗಳನ್ನು ಸ್ಥಾಪಿಸಿದರು. ಅವರ ಕನಸು ಈಡೇರಿಸಬೇಕೆಂದರೆ ಯಾರು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕರೆ ನೀಡಿದರು.
ಪುರಸ್ಕೃತರ ಪರವಾಗಿ ಡಾ.ಚಿರಂಜೀವಿ ಸಿಂಗ್ ಮಾತನಾಡಿ, ಆದ್ಯತೆ ಶಿಕ್ಷಣ ಮಾತ್ರ. ನಾವು ಚೆನ್ನಾಗಿ ಓದಬೇಕು. ಶಿಕ್ಷಣವನ್ನು ಕೇವಲ ಅಂಕಗಳಿಗಾಗಿ ಅಲ್ಲ, ದೇಶಕ್ಕಾಗಿ ಬಳಸಬೇಕು. ಅದೇ ನಾವು ಆಝಾದ್ ಅವರಿಗೆ ನೀಡುವ ನಿಜವಾದ ಗೌರವ ಎಂದು ನುಡಿದರು.
ಗಣ್ಯರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಚಿಂತಕ ಡಾ.ಚಿರಂಜೀವಿ ಸಿಂಗ್, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ, ಹಿರಿಯ ಸಾಹಿತಿ ಬಾನು ಮುಷ್ತಾಕ್, ಜೈನ್ ವಿವಿಯ ಕುಲಪತಿ ಡಾ.ಚೆನ್ನರಾಜ ರಾಯಚಂದ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ, ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯ ನಿವೃತ್ತ ಪ್ರಾಂಶುಪಾಲ ಡಾ.ಅಬ್ರಾಹಂ ಇಬ್ನೇಜರ್, ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ, ಸಮಾಜ ಸೇವಕಿ ಹಾಗೂ ಬೆಂಗಳೂರಿನ ಸುಮ್ಮನಹಳ್ಳಿ ಕುಷ್ಠರೋಗಿಗಳು ಮತ್ತು ಪುನರ್ ವಸತಿ ಕೇಂದ್ರದ ಸಿಸ್ಟರ್ ಮೇರಿ ಮಸ್ಕರೇನ್ಯಾಸ್, ಎಕ್ಸ್ಪರ್ಟೈಸ್ ಗ್ರೂಪ್ ಆಫ್ ಕಂಪನೀಸ್ ಸಿಒಒ ಕರ್ನಿರೆ ಸೆಯ್ಯದ್ ಶೇಖಬ್ಬ, ಹಿರಿಯ ಪತ್ರಕರ್ತ ರಫೀಕ್ ಭಂಡಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜತೆಗೆ ತುಮಕೂರಿನ ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿ, ಉತ್ತರ ಕನ್ನಡ ಭಟ್ಕಳದ ಅಂಜುಮನ್ ಶಿಕ್ಷಣ ಸಂಸ್ಥೆ, ಭಟ್ಕಳ, ಹಾವೇರಿಯ ಕನಕಗುರುಪೀಠ ಶಿಕ್ಷಣದ ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಸೊಸೈಟಿ, ದಕ್ಷಿಣ ಕನ್ನಡದ ಸೆಂಟ್ ಅಲೋಶಿಯಸ್ ಕಾಲೇಜು ಕೊಡಿಯಾಲ್ ಬೈಲ್ ಸಂಸ್ಥೆಗಳಿಗೂ ಗೌರವಿಸಲಾಯಿತು.
ಇದೇ ವೇಳೆ ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತು ಇಂಗ್ಲಿಷ್ ಅಕಾಡೆಮಿಯ ಮುಹಮ್ಮದ್ ಮುನಾವರ್ ಜಮಾ ಹಾಗೂ NLSIU ಉಪ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರು ಶಿಕ್ಷಣ ಮೌಲ್ಯದ ಕುರಿತು ತಮ್ಮ ಸಂದೇಶ ಉಲ್ಲೇಖಿಸಿದರು.
ಮಾಜಿ ಸಚಿವ ರಹೀಂ ಖಾನ್, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ಶಾಸಕರಾದ ಇಕ್ಬಾಲ್ ಹುಸೇನ್, ಖನೀಜ್ ಫಾತಿಮಾ, ವಿಧಾನ ಪರಿಷತ್ತಿನ ಸದಸ್ಯರಾದ ಅಬ್ದುಲ್ ಜಬ್ಬರ್, ಬಿಲ್ಕಿಸ್ ಬಾನು, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಹುಸೈನಿ, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್ ಸೇರಿದಂತೆ ಪ್ರಮುಖರು ಇದ್ದರು. ಗಣ್ಯರನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕಿ ಯಾಸ್ಮಿನ್ ಬೇಗಂ ಜಿ ವಾಲಿಕರ್ ಸ್ವಾಗತಿಸಿದರು.