‘ಉಚಿತ ಎಲೆಕ್ಟ್ರಿಕ್ ಸ್ಟೌ’ ವಿತರಣೆ ಎಂಬ ಸಂದೇಶ ನಕಲಿ: ಪ್ರಲ್ಹಾದ್ ಜೋಶಿ
MNRE ಹೆಸರಿಲ್ಲಿ ನಕಲಿ ಸಂದೇಶ; ನಂಬದಿರಲು ಸಚಿವರ ಮನವಿ
ಪ್ರಲ್ಹಾದ್ ಜೋಶಿ | Photo credit : PTI
ನವದೆಹಲಿ: ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಿಸಲಾಗುತ್ತಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವು ನಕಲಿ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಹೆಸರಿನಲ್ಲಿ ಇಂತಹ ಸುಳ್ಳು ಸುದ್ದಿ ಹಾಗೂ ಸಂದೇಶಗಳನ್ನು ಹರಿಬಿಡಲಾಗುತ್ತಿದೆ. MNRE ವತಿಯಿಂದ ‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಎಂಬ ಯಾವುದೇ ಯೋಜನೆ ಜಾರಿಗೊಳಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಗರಿಕರು ಇಂತಹ ನಕಲಿ ಸಂದೇಶಗಳಿಗೆ ಬಲಿಯಾಗದೆ ಎಚ್ಚರಿಕೆ ವಹಿಸಬೇಕು. ಸಚಿವಾಲಯದ ಅಧಿಕೃತ ವೆಬ್‌ಸೈಟ್ ಹಾಗೂ ಪರಿಶೀಲಿತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಮನವಿ ಮಾಡಿದ್ದಾರೆ.
ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಪರಿಶೀಲಿಸದೆ ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು. ಬ್ಯಾಂಕಿಂಗ್, ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳು, ಅಧಿಕೃತ ಪ್ರಕಟಣೆಗಳು ಹಾಗೂ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳನ್ನು ಮಾತ್ರ ಅವಲಂಬಿಸುವಂತೆ ಸಚಿವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.