ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ: ಸಿಎಂ ಡಿ.ಕೆ.ಶಿವಕುಮಾರ್
ಮಡಿಕೇರಿ: "ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕು. ಎರಡೂ ಬಹಳ ಮುಖ್ಯ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ" ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ರವಿವಾರ ಪ್ರತಿಕ್ರಿಯೆ ನೀಡಿದರು.
"ಕುಡಿಯುವ ನೀರು, ಕೃಷಿಗೆ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ನಾವು ನಿರ್ಧಾರ ಕೈಗೊಳ್ಳಬೇಕು. ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಬೇಕು, ರೈತರಿಗೆ ಅನ್ನ ಸಿಗಬೇಕು ಎಂಬುದು ನಮ್ಮ ಆಶಯ" ಎಂದು ತಿಳಿಸಿದರು.
"ನಮ್ಮ ರಾಜ್ಯದ ಒಳಗೆ ಯಾವುದೇ ಅಣೆಕಟ್ಟು ಕಟ್ಟಲು ಅಭ್ಯಂತರವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಕೇಂದ್ರ ಸರಕಾರ ಕೂಡ ತಮಿಳುನಾಡಿನ ಸಂಸದರಿಗೆ ಉತ್ತರ ನೀಡುವಾಗಲೂ ಸ್ಪಷ್ಟಪಡಿಸಿದೆ. ಮೇಕೆದಾಟು ನಿರ್ಮಾಣದಿಂದ ತಮಿಳುನಾಡಿಗೆ ನಿಗದಿಯಾಗಿರುವ 177.25 ಟಿಎಂಸಿ ನೀರಿನ ಹಂಚಿಕೆಗೆ ತೊಂದರೆಯಾಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಗೆ ಪ್ರತ್ಯೇಕ ನಿಯಮಗಳಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ. ನಮ್ಮ ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದರೆ ಅನಗತ್ಯ ಸಂಕಷ್ಟ ಎದುರಾಗಬಹುದು. ಆ ಪರಿಸ್ಥಿತಿ ಬರಬಾರದು. ನಾವು ಕಾನೂನು ಪಾಲಿಸದಿದ್ದರೆ ಅಣೆಕಟ್ಟು ನಿಯಂತ್ರಣವನ್ನ ಕೇಂದ್ರ ಸರಕಾರಕ್ಕೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು" ಎಂದರು.
ಯಾವುದೇ ಸಂಘಟನೆಯಾದರೂ ಕಾನೂನು ಪಾಲಿಸಬೇಕು :
ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು ಎನ್ನುವ ನಿಯಮದ ಬಗ್ಗೆ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಆಕ್ಷೇಪದ ಬಗ್ಗೆ ಕೇಳಿದಾಗ, "ನಾವು ಮೊದಲಿನಿಂದಲೂ ಯಾವುದನ್ನೋ ಹಿಡಿದುಕೊಂಡು ರಾಜಕೀಯ ಮಾಡುವುದಿಲ್ಲ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ಯಾವುದೇ ಸಂಘಟನೆಯಾಗಲಿ ಕಾನೂನು ಪಾಲಿಸಬೇಕು. ಸರ್ಕಾರಕ್ಕೆ ಅನುಮತಿ ಕೋರಿ ಅರ್ಜಿ ಬಂದರೆ, ನಿಯಮಾನುಸಾರ ಅಗತ್ಯ ಅನುಮತಿ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.