ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ ಜಿಐಎಸ್ ಆಧಾರಿತ ಆಪ್ : ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು : ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್ ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ.
ಗ್ರಾಮೀಣ ನೀರು ಸರಬರಾಜು ಮತ್ತು ಮೂಲಸೌಕರ್ಯದ ಸುಸ್ಥಿರ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ಸಿದ್ಧಪಡಿಸಲಾಗಿರುವ ಮೊಬೈಲ್ ಮತ್ತು ವೆಬ್ ಅಪ್ಲಿಕೆಷನ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಜಿಯೋ ಟ್ಯಾಗ್ ಮಾಡಿ ಪಾರದರ್ಶಕತೆ ತರಲಾಗುವುದು ಎಂದರು.
ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಜಲ ಆಸ್ತಿಗಳಿದ್ದು ಇವೆಲ್ಲವನ್ನೂ ಸೆಪ್ಟೆಂಬರ್ ಅಂತ್ಯದೊಳಗೆ ಡಿಜಟಲೀಕರಿಸಲಾಗುವುದು. ಈಗಾಗಲೇ ಮೊದಲ ಹಂತದ ಪರಿಶೀಲನೆ ಅಡಿಯಲ್ಲಿ ಈವರೆಗೆ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳ ದಾಖಲೀಕರಣ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಆ ವ್ಯವಸ್ಥೆಯಡಿ 3 ಹಂತದ ಪರಿಶೀಲನೆ ನಡೆಯಲಿದ್ದು, ಮೊದಲ ಹಂತದಲ್ಲಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ಸಪೋರ್ಟ್ ಎಂಜಿನಿಯರ್ ಗಳು ನೂರಕ್ಕೆ 100ರಷ್ಟು ಜಲ ಆಸ್ತಿಯ ಖುದ್ದು ಪರಿಶೀಲನೆ ನಡೆಸಲಿದ್ದಾರೆ. 2ನೇ ಹಂತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು ಶೇ.5ರಷ್ಟು ಆಸ್ತಿಯ ಯಾದೃಚ್ಛಿಕ (Random) ಪರಿಶೀಲನೆ ಮಾಡುತ್ತಾರೆ. ಈ ಹಂತದಲ್ಲಿ ಲೋಪ ಕಂಡು ಬಂದಲ್ಲಿ ಸಂಬಂಧಿತ ಗುತ್ತಿಗೆದಾರರು, ಎಂಜಿನಿಯರುಗಳನ್ನು ಹೊಣೆ ಮಾಡಲಾಗುವುದು ಎಂದರು.
ಮೂರನೇ ಹಂತದಲ್ಲಿ ಕಾರ್ಯಪಾಲಕ ಎಂಜಿನಿಯರ್ ಶೇ.2ರಷ್ಟು ಆಸ್ತಿಯ ಯಾದೃಚ್ಛಿಕ ಪರಿಶೀಲನೆ ನಡೆಸುತ್ತಾರೆ. 3 ಹಂತದ ತಪಾಸಣೆ ನಡೆಯುವ ಕಾರಣ ಗುತ್ತಿಗೆದಾರರಿಗೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಅನುಷ್ಠಾನ ಮಾಡುವ ಕೆಳ ಹಂತದ ಅಧಿಕಾರಿಗಳಲ್ಲಿ ಹೊಣೆಗಾರಿಕೆ ಹೆಚ್ಚುತ್ತದೆ ಮತ್ತು ಇದು ಪಾರದರ್ಶಕತೆ ತರಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದಲ್ಲಿ ಈ ಮೊಬೈಲ್ ಮತ್ತು ವೆಬ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ ಈಶ್ವರ ಖಂಡ್ರೆ, ಇದು ಎಲ್ಲ ಕಾಮಗಾರಿ ಮತ್ತು ಜಲ ಆಸ್ತಿಗಳನ್ನು 5 ಮೀಟರ್ ನಿಖರತೆಯೊಂದಿಗೆ ಜಿಯೋ ಟ್ಯಾಗ್ ಮಾಡಲು ನೆರವಾಗುತ್ತದೆ ಎಂದರು.
ಇದರಿಂದ ಕಾಮಗಾರಿಯನ್ನೇ ಮಾಡದೆ ನಕಲಿ ಬಿಲ್ ಮಾಡಲು ಅವಕಾಶ ಇರುವುದಿಲ್ಲ ಮತ್ತು ಸೃಜಿಸಲಾದ ಆಸ್ತಿಯ ಗುಣಮಟ್ಟದ ಪರೀಕ್ಷೆಗೂ ಸಹಕಾರಿಯಾಗುತ್ತದೆ. ಎಲ್ಲ ಜಲ ಆಸ್ತಿಗಳ ಮೂಲ ಮಾಹಿತಿ, ಅವುಗಳ ಭೌತಿಕ ಸ್ಥಿತಿ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸ್ಥಿತಿಗತಿ ಈ ಆಪ್ ನಲ್ಲಿ ದಾಖಲಾಗುವ ಕಾರಣ ಸರ್ಕಾರದ ಯೋಜನೆ ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಆಪ್ ನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕೊರೆಸಲಾಗುವ ಬೋರ್ ವೆಲ್, ನಿರ್ಮಿಸಲಾಗುವ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿ, ಪಂಪ್ ಹೌಸ್, ಜಲ ಶುದ್ಧೀಕರಣ ಘಟಕ, ಸಮತೋಲಿತ ಕೆರೆಗಳು, ಸರೋವರ, ಪ್ರಯೋಗಾಲಯ, ಕೈ ಪಂಪ್ ಇತ್ಯಾದಿಗಳನ್ನು ಕಡ್ಡಾಯವಾಗಿ ಜಿಯೋ ಟ್ಯಾಗ್ ಮಾಡಲು ಸೂಚಿಸಲಾಗಿದೆ ಎಂದೂ ಈಶ್ವರ್ ಖಂಡ್ರೆ ತಿಳಿಸಿದರು.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೃಜಿಸಲಾಗಿರುವ ಎಲ್ಲ ಕುಡಿಯುವ ನೀರಿನ ಆಸ್ತಿಗಳನ್ನು ಮೊದಲಿಗೆ ಜಿಯೋ ಟ್ಯಾಗ್ ಮಾಡಿ ದಾಖಲೀಕರಣ ಮಾಡಬೇಕು. ನಂತರ ಹೊಸ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಜಿಯೋ ಟ್ಯಾಗ್ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಜೊತೆಗೆ ಕೊಳವೆ ಬಾವಿ ಕೊರೆದಿರುವ ಬಗ್ಗೆ ಜಿಯೋ ಟ್ಯಾಗ್ ಮಾಡುವ ಕಾರಣ ಮೂರನೇ ವ್ಯಕ್ತಿಯಿಂದ ತಪಾಸಣೆ ಮಾಡಿಸಿದಾಗ ಎಷ್ಟು ಅಡಿ ಕೊಳವೆ ಬಾವಿ ಕೊರೆದಿದ್ದಾರೆ, ಎಷ್ಟು ಆಳಕ್ಕೆ ಪೈಪ್ ಅಳವಡಿಸಿದ್ದಾರೆ. ಎಷ್ಟು ಎಚ್.ಪಿ. ಮೋಟರ್ ಅಳವಡಿಸಿದ್ದಾರೆ ಎಂಬ ಎಲ್ಲ ಮಾಹಿತಿ ಜಿಯೋ ಟ್ಯಾಗ್ ಆಗಿ ದಾಖಲಾಗುವ ಕಾರಣ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದೂ ಸಚಿವರು ತಿಳಿಸಿದರು.
ಇಲಾಖೆಯಲ್ಲಿ ಪಾರದರ್ಶಕತೆ ತರುವ ಮೂಲಕ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಹೆಚ್ಚು ಜನಸ್ನೇಹಿಯಾಗಿ ಮಾಡುವುದು ಇಲಾಖೆಯ ಉದ್ದೇಶವಾಗಿದ್ದು, ಈ ಹೊಸ ಆಪ್ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ತರಬೇತಿಯನ್ನೂ ಕೊಡಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ನಿಷ್ಕ್ರಿಯವಾಗಿರುವ ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಪಂಪ್ ಸೆಟ್ ಮತ್ತು ವಿದ್ಯುತ್ ಸಂಪರ್ಕವನ್ನು ತೆಗೆದು ಹಾಕಿ, ಅನಗತ್ಯವಾಗಿ ವಿದ್ಯುತ್ ಬಿಲ್ ಹೊರೆ ಬಾರದಂತೆ ಕ್ರಮ ವಹಿಸುವಂತೆಯೂ ಈ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಹಾಜರಿದ್ದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಬತ್ತಿ ಹೋಗಿರುವ ಕೊಳವೆ ಬಾವಿಗಳ ಮರು ಪೂರಣಕ್ಕೆ ವಿಬಿಜಿ ರಾಮ್ ಜಿ ಅಡಿಯಲ್ಲಿ ಕ್ರಮ ವಹಿಸಲು ಸೂಚಿಸಲಾಗಿದೆ. 7700 ಕೊಳವೆ ಬಾವಿಗಳನ್ನು ಈವರೆಗೆ ಮರು ಪೂರಣ (ರೀ ಚಾರ್ಜ್) ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರದ ವತಿಯಿಂದ ಎಷ್ಟು ಕೊಳವೆ ಬಾವಿ ಕೊರೆಯಲಾಗಿದೆ. ಎಷ್ಟು ನಿಷ್ಕ್ರಿಯವಾಗಿದೆ. ಎಷ್ಟು ಮರುಪೂರಣಕ್ಕೆ ಅರ್ಹವಾಗಿವೆ ಎಂಬ ಮಾಹಿತಿ ಕಲೆಹಾಕಿ, ಕಾರ್ಯಸಾಧ್ಯವಾದ ಕೊಳವೆ ಬಾವಿಗಳ ಮರುಪೂರಣಕ್ಕೆ ಸೂಚನೆ ನೀಡಲಾಗಿದೆ ಎಂದರು.
ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.