ಕಸ್ತೂರಿ ರಂಗನ್ ವರದಿ | ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ: ಸಿಎಂ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ಕಸ್ತೂರಿ ರಂಗನ್ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರಕಾರವು ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿ ಬಗ್ಗೆ ಆತಂಕ ಪಡಬೇಕಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೆ ಪಶ್ಚಿಮಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ. ಇದು ಅತ್ಯಂತ ಖಂಡನೀಯ ಎಂದು ಟೀಕಿಸಿದರು.
ಕರಡು ಅಧಿಸೂಚನೆಯನ್ನು ಸರಕಾರ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಈ ವಿಷಯದ ಕುರಿತು ನಮ್ಮ ಸರಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ನಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ. ಆದರೂ ನಮ್ಮ ವಿರೋಧವನ್ನು ಪರಿಗಣಿಸಿಲ್ಲ. ಹೀಗಾಗಿ ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿರುವಂತೆಯೇ ಕರ್ನಾಟಕದ ರಾಜ್ಯದ 1,449 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಈ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಜನವಸತಿ ಪ್ರದೇಶ, ಕೃಷಿ ಭೂಮಿ ಇರುವ ಪ್ರದೇಶವನ್ನೂ ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಗುರುತಿಸಿರುವುದರಿಂದ ಮಲೆನಾಡಿನ ರೈತರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ, ರಾಜ್ಯ ಸರಕಾರ ಈ ವರದಿಯ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಕರಡು ಅಧಿಸೂಚನೆಯನ್ನು ವಿರೋಧಿಸಲಿದೆ. ಹೀಗಾಗಿ ಮಲೆನಾಡಿನ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಕುರಿತು ಪಕ್ಷಾತೀತ ಚರ್ಚೆಗೆ ಶೀಘ್ರದಲ್ಲೇ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆಯಲಿದ್ದು, ಆ ಭಾಗದ ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಮಲೆನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ನಮ್ಮ ಸರಕಾರವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಶ್ಚಿಮಘಟ್ಟ, ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದುದರಿಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕ ಪಡಬಾರದು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ನಮ್ಮ ಸರಕಾರ ಬಿಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.