Monsoon session | ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ
ಸುಧಾಕರ್ ಹೆಸರಲ್ಲಿ ಸಣ್ಣ ನೀರಾವರಿ ಯೋಜನೆ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಇತ್ತೀಚೆಗೆ ನಿಧನರಾದ ಸಚಿವ ಡಿ.ಸುಧಾಕರ್, ಮಾಜಿ ಉಪಸಭಾಧ್ಯಕ್ಷ ಸಿ.ವೀರಣ್ಣ, ಮಾಜಿ ಸಚಿವರಾದ ವೆಂಕಟರಮಣಪ್ಪ, ರಾಮಚಂದ್ರಗೌಡ, ಮಾಜಿ ಶಾಸಕರಾದ ಎಚ್.ಹನುಮಂತಪ್ಪ, ಸೈಯದ್ ಯಾಸಿನ್, ಗಾಯಕಿ ಎಸ್.ಜಾನಕಿ, ಆಶಾಭೋಸ್ಲೆ ಹಾಗೂ ದೇವೇಗೌಡ ಅವರ ಪತ್ನಿ ಚೆನ್ನಮ ಸೇರಿದಂತೆ ಹಲವು ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರುವಾರ ಬೆಳಗ್ಗೆ 11ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಕ್ರಮವಾಗಿ ಹಂಗಾಮಿ ಅಧ್ಯಕ್ಷ ಟಿ.ಬಿ. ಜಯಚಂದ್ರ, ಸಭಾಪತಿ ಪುಟ್ಟಣ್ಣ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ನಿಧನರಾದ ಗಣ್ಯರ ಸಾರ್ವಜನಿಕ ಸೇವೆ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರುಗಳು ನಿಧನ ಹೊಂದಿರುವುದನ್ನು ಸದನಕ್ಕೆ ತಿಳಿಸಿದರು.
ನೀರಾವರಿ ಯೋಜನೆಗೆ ಸುಧಾಕರ್ ಹೆಸರು: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಮನುಷ್ಯನ ಹುಟ್ಟು ಆಕಸ್ಮಿಕ. ಸಾವು ಖಚಿತ. ಶೋಕಿಸುವುದು ಸಹಜ ಕರ್ತವ್ಯ. ಆದರೆ, ಯಾವುದೇ ಪ್ರಯೋಜನ ಇಲ್ಲ. ಇದರ ಬದಲಾಗಿ ಸುಧಾಕರ್ ಪ್ರಮುಖ ಕನಸು, ಯೋಜನೆಗಳನ್ನು ಸಾಕಾರಗೊಳಿಸಬೇಕು ಎಂದರು.
ನನ್ನ ಮಿತ್ರ ಸುಧಾಕರ್ ನೀರಾವರಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಅವರ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು ಎಂದು ಚಿತ್ರದುರ್ಗದ ಎಲ್ಲ ಶಾಸಕರು ಪ್ರಯತ್ನ ಮಾಡಿದರು. ಸುಧಾಕರ್‍ರ ಹೆಸರನ್ನು ಚಿಸ್ಥಾಯಿ ಗೊಳಿಸುವ ನಿಟ್ಟಿನಲ್ಲಿ ಅವರ ನೆನಪಿನಲ್ಲಿ ಸಣ್ಣ ನೀರಾವರಿ ಯೋಜನೆಗೆ ಅವರ ಹೆಸರನ್ನು ನಾಮಕಾರಣ ಮಾಡಬೇಕೆಂಬ ನಿರ್ಧಾರ ಮಾಡಿದ್ದೇನೆ ಎಂದು ಅವರು ಪ್ರಕಟಿಸಿದರು.
ಸಾವಿನ ಸತ್ಯ: ‘ಕೊರಗಲೇಕೆ, ಮರುಗಲೇಕೆ, ಹುಟ್ಟಿ ಬಂದಿದ್ದೇ.. ಅಳಲೇಕೆ, ಸುಖವೇ ಬರಲಿ, ದುಃಖವೇ ಬರಲಿ, ರೋಗ ಭೋಗವೇ ಇರಲಿ, ಎಲ್ಲ ಹೊತ್ತು, ಋಣ ತೆತ್ತು, ಮುಂದೆ ಪುಣ್ಯದ ಬೀಜ ಬಿತ್ತು’ ಎಂದು ಸಿಎಂ ಡಿ.ಕೆ.ಶಿವಕುಮಾರ್, ಸುಧಾಕರ್ ಅಗಲಿಕೆ ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಸ್ಥಿತಿ ಈಗ ಬಂದಿದೆ’ ಎಂದು ಉಲ್ಲೇಖಿಸಿದರು.
ತೋಳ ತೋಳ: ಮಾಜಿ ಸಚಿವ ಪಾವಗಡದ ವೆಂಕಟರಣಪ್ಪ ಅವರನ್ನು ನಾವು ‘ತೋಳ, ತೋಳ’ ಎಂದು ಕರೆಯುತ್ತಿದ್ದೆವು. ಸಣ್ಣ ಕೈಗಾರಿಕೆ, ರೇಶ್ಮೆ, ಜವಳಿ ಸಚಿವರಾಗಿದ್ದರು. ಕುಡಿಯುವ ನೀರಿಗೆ ಬಹುದೊಡ್ಡ ಹೋರಾಟ ಮಾಡಿದವರು. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೆ ಶ್ರಮಿಸಿದ್ದರು. ಕೃಷಿ ವೃತ್ತಿ, ರಾಜಕೀಯ ಪ್ರವೃತ್ತಿ ಎಂದು ಹೇಳುತ್ತಿದ್ದರು ಎಂದು ಶಿವಕುಮಾರ್ ಸ್ಮರಿಸಿದರು.
ನಮ್ಮೊಂದಿಗೆ ಆಯ್ಕೆಯಾಗಿದ್ದರು: ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ಅಳಿಯ ಸೈಯದ್ ಯಾಸೀನ್ ಅವರು ಮೂರು ಬಾರಿ ನನ್ನ ಜೊತೆ ಶಾಸಕರಾಗಿದ್ದರು. ರಾಯಚೂರು ಮೂಲದ ಯಾಸಿನ್ ಅವರು ಸರಳ, ಸಜ್ಜನಿಕೆಗೆ ಹೆಸರಾಗಿದ್ದರು. ರಾಯಚೂರು ವಿದಾನಸಭಾ ಕ್ಷೇತ್ರದಿಂದ 1999 ಮತ್ತು 2008ರಲ್ಲಿ 11ನೇ ಮತ್ತು 13ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ಸ್ಮರಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ರಘುಮೂರ್ತಿ, ಬಿ.ನಾಗೇಂದ್ರ, ಶಿವಲಿಂಗೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು, ಸದಸ್ಯರಾದ ಜಿ.ಟಿ.ದೇವೇಗೌಡ, ವಿಜಯೇಂದ್ರ, ಡಾ.ರಂಗನಾಥ್ ಸೇರಿದಂತೆ ಇನ್ನಿತರರು ಅಗಲಿದ ಗಣ್ಯರನ್ನು ಸ್ಮರಿಸಿದರು. ಆ ಬಳಿಕ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.