ʼಕರ್ನಾಟಕ ಬಂದ್ʼಗೆ ಮೈಸೂರಿನಲ್ಲಿ ಸಿಗದ ಬೆಂಬಲ: ಸಾಂಕೇತಿಕವಾಗಿ ರೈತ ಸಂಘ, ಕನ್ನಡಪರ ಹೋರಾಟಗಾರರ ಪ್ರತಿಭಟನೆ

Update: 2026-08-13 14:27 IST

ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮೈಸೂರಿನಲ್ಲಿ ಬೆಂಬಲ ಸಿಗದೆ ಸಹಜ ಸ್ಥಿತಿಯತ್ತ ಜನಜೀವನ ಮುಂದುವರೆದಿದ್ದು, ರೈತ ಸಂಘ, ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ನಗರದ ಆರ್ಡಿಂಜ್ ವೃತ್ತದ ಒಂದು ಬದಿಯಲ್ಲಿ ಗುರುವಾರ ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ (ರೈತಪರ್ವ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಮತ್ತೊಂದು ಬದಿಯಲ್ಲಿ ಬಂದ್ ಗೆ ಬೆಂಬಲ ನೀಡದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಹಾಗೂ ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಕಾವಲು ಪಡೆ ವತಿಯಿಂದ  ಚಳುವಳಿ ನಡೆಸಲಾಯಿತು.

ಬಂದ್ ಬೆಂಬಲಿಸಿ ಗುರುವಾರ ಬೆಳಿಗ್ಗೆ ಕೆಲವು ಕನ್ನಡ ಹೋರಾಟಗಾರರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಕರ್ನಾಟಕ ಸಾರಿಗೆ ಬಸ್ ಗಳನ್ನು ತಡೆಯಲು ಮುಂದಾದರು. ಪೊಲೀಸರು ಹೋರಾಟಗಾರರನ್ನು ಬಂಧಿಸಿದರು. ಕನ್ನಡ ಪರ ಹೋರಾಟಗಾರ ತೇಜಸ್ ಲೋಕೇಶ್ ಗೌಡ ಬಸ್ ಗೆ ಅಡ್ಡಲಾಗಿ ಮಲಗಲು ಯತ್ನಿಸಿದ ವೇಳೆ ಪೊಲೀಸರು ಅವರನ್ನು ಬಂಧಿಸಿದರು.

ಕರ್ನಾಟಕ ರಾಜ್ಯ ರೈತಪರ್ವ ಸಂಘಟನೆಯವರು ಕರ್ನಾಟಕ ಬಂದ್ ಬೆಂಬಲಿಸಿ ಆರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದ ಜನರಿಗೆ ಕುಡಿಯುವ ನೀರಿಲ್ಲ. ಕೆರೆ ನಾಲೆಗಳಿಗೆ ನೀರು ಹರಿಸುವಂತೆ ಅದೇಶ ನೀಡುವ ಕಾವೇರಿ ನಿರ್ವಹಣಾ ಮಂಡಳಿಯ ಏಕಪಕ್ಷೀಯ ತೀರ್ಮಾನ ಖಂಡನೀಯ ಎಂದರು.

ಈ ವೇಳೆ ಅಧ್ಯಕ್ಷರಾದ ಅರುಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಚಾಮರಾಜು ಮಂಡಕಳ್ಳಿ, ಕಾರ್ಯಾಧ್ಯಕ್ಷ ನವೀನ್ ಕುಮಾರ್, ಶ್ರೀಧರ್ ನಾಯಕ್, ಸಂಚಾಲಕ ಮಂಚ ನಾಯಕ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಯೋಗಿ, ಭಾಗ್ಯಮ್ಮ, ಕೃಷ್ಣ ನಾಯಕ, ನಾರಯಣ ಮೀಸೆ ಮಂಜಣ್ಣ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಭಾಗವಹಿಸಿದ್ದರು.

ಹಾರ್ಡಿಂಜ್ ವೃತ್ತದ ಮತ್ತೊಂದು ಬದಿಯಲ್ಲಿ ಕನ್ನಡ ಕಾವಲುಪಡೆ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಗೌಡ ನೇತೃತ್ವದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮತ್ತು ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ನೆಲದಲ್ಲಿ ಹಾಸಿಗೆ ದಿಂಬು ಹಾಕಿ ಚಳುವಳಿ ನಡೆಸಲಾಯಿತು.

ಇದೇ ವೇಳೆ ಮಾತನಾಡಿದ ಮೋಹನ್ ಕುಮಾರ್ ಗೌಡ, ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಅದರೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸದ ಹಿನ್ನಲೆಯಲ್ಲಿ ನಮ್ಮ ಸಂಘಟನೆ ಬಂದ್ ಗೆ ಬೆಂಬಲ ನೀಡುತ್ತಿಲ್ಲ, ಆದರೆ ಕನ್ನಡ ನೆಲ,ಜಲದ ವಿಚಾರ ಬಂದಾಗ ಹೋರಾಟ ಮಾಡುವುದು ಅನಿವಾರ್ಯ. ಕಾವೇರಿ ನೀರಿಗಾಗಿ ನಾವು ಹೋರಾಟ ಮಾಡುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಹೊಸಕೋಟರ ಬಸವರಾಜು, ಪಿ.ಮರಂಕಯ್ಯ, ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News