ಬೆಂಗಳೂರು : ಕಸದಿಂದ ಹಣ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ನಿಯಮಗಳನ್ನು ಉಲ್ಲಂಘನೆ ಮಾಡಿ ಜಿಎಸ್‍ಟಿಯೆ ಇಲ್ಲದ ಮುನಿಯಪ್ಪ ಎಂಟರ್‌ ಪ್ರೈಸಸ್ ಎಂಬ ಬೇನಾಮಿ ಕಂಪನಿಗೆ 133 ಕೋಟಿ ರೂ. ಟೆಂಡರ್ ನೀಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018 ರಲ್ಲಿ ರಾಜ್ಯ ಸರಕಾರ ಟೆಂಡರ್ ಸಂಬಂಧ ಹೊರಡಿಸಿದ ಆದೇಶವನ್ನು ಉಲ್ಲಂಘನೆ ಮಾಡಿದೆ. ಹೆಚ್ಚುವರಿ ಭದ್ರತಾ ಠೇವಣಿ ಪಡೆಯದೆ ಕಮಿಷನ್ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಕಂಪನಿ ಟೆಂಡರ್ ಪಡೆಯಲು ಕನಿಷ್ಠ ಹತ್ತು ಕೋಟಿ ರೂ. ವಹಿವಾಟು ಸಾಮಥ್ರ್ಯ ಇರಬೇಕು ಎಂಬ ಮಾರ್ಗಸೂಚಿ ಇದೆ. ಈ ಸಂಬಂಧ ಹಣಕಾಸು ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಆದರೂ, ನಿಯಮಾವಳಿಗಳನ್ನು ಉಲ್ಲಂಘಿಸಿ, ಮುನಿಯಪ್ಪ ಎಂಟರ್‌ ಪ್ರೈಸಸ್‍ಗೆ ಕಾರ್ಯಾದೇಶ ನೀಡಲಾಗಿದೆ ಎಂದು ಅವರು ಆರೋಪಿಸಿದರು.

ಭದ್ರತಾ ಠೇವಣಿ ಇಲ್ಲದೆ ಇದ್ದರೆ ಟೆಂಡರ್ ತಿರಸ್ಕರಿಸಬೇಕು ಎಂಬ ನಿಯಮ ಇದೆ.  ಟೆಂಡರ್ ನಲ್ಲಿ ಅರ್ಹತಾ ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಇದರಲ್ಲಿ ಶೇ.40ರಷ್ಟು ಕಮಿಷನ್ ಪಡೆದಿರುವ ಶಂಕೆ ಇದೆ ಎಂದು ಅಶೋಕ್ ದೂರಿದರು.

ಕೃಷ್ಣ ಭೈರೇಗೌಡ ಸಚಿವರಾದಾಗ ‘ಕಸದಿಂದ ಸ್ವಾತಂತ್ರ್ಯ’ ಎಂದು ಘೋಷಣೆ ಮಾಡಿದರು. ಆದರೆ ಇವರೇ ಕಸದಲ್ಲಿ ಹಣ ಹೊಡೆದಿದ್ದಾರೆ. ತ್ಯಾಜ್ಯ ವರ್ಗಾವಣೆಯ ಎಲ್ಲ ಸ್ಟೇಷನ್‍ಗಳ ಪ್ಯಾಕೇಜ್‍ಗಳನ್ನು ಸರಕಾರ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ಲೋಕಾಯುಕ್ತದಿಂದ ತನಿಖೆ ಆಗಬೇಕು, ಕಡತಗಳನ್ನು ವಶಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ: ಎಲ್ಲ ದಾಖಲೆಗಳೊಂದಿಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಟೆಂಡರ್ ರದ್ದು ಮಾಡದೇ ಇದ್ದಲ್ಲಿ ಈ ಅಕ್ರಮದಲ್ಲಿ ಮುಖ್ಯಮಂತ್ರಿಗಳಿಗೂ ಪಾಲು ಇದೆ ಎಂದಾಗುತ್ತದೆ. ಸ್ವಚ್ಛ ಭಾರತ ಕೇಂದ್ರ ಸರಕಾರದ ಯೋಜನೆ. ಇದಕ್ಕೆ ಹಣ ಕೊಡೊದು ಕೇಂದ್ರ. ಹಣ ಕೊಡದೇ ಇದ್ದರೆ ಮುಖ್ಯಮಂತ್ರಿ ಆರೋಪಿಸುತ್ತಾರೆ. ಕೊಟ್ಟರೆ ಈ ರೀತಿ ಲೂಟಿ ಮಾಡುತ್ತಾರೆ ಎಂದು ಅವರು ಕಿಡಿಗಾರಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor