ಸಿದ್ದರಾಮಯ್ಯ ವಿರುದ್ಧ ʼಸ್ಟಿಂಗ್ʼ ವೀಡಿಯೊ ಪ್ರಕರಣ; ಬಂಧಿತ ಆರೋಪಿಗೆ ಜಾಮೀನು
ಸಾಂದರ್ಭಿಕ ಚಿತ್ರ photo: magnific
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಉದ್ದೇಶ ಪೂರ್ವಕವಾಗಿ ತೇಜೋವಧೆ ಮಾಡಲು ವೀಡಿಯೊ ಮಾಡಿದ್ದ ಪ್ರಕರಣದ ಆರೋಪಿಗೆ ದಿನ ಕಳೆಯುವ ಮೊದಲೇ ಜಾಮೀನು ಸಿಕ್ಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಸಿಸಿಬಿ ಪೊಲೀಸರು ಇಂದು(ಅ.24) ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಆದರೆ, ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಗಳು ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ಹೊಂದಿರುವುದು ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ರಾಕೇಶ್ ಶೆಟ್ಟಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವುದು ಪರಿಗಣಿಸಿ 66 ನೇ ಸಿಸಿಎಚ್ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಆರೋಪಿ ರಿತೇಶ್ ಪಾಂಡೆ 15 ಸಾವಿರಕ್ಕೆ ಹಳೇ ಮೊಬೈಲ್‌ವೊಂದನ್ನು ದಿಲ್ಲಿಯ ಕರೋಲ್ ಬಾಗ್ ನಲ್ಲಿ ಖರೀದಿ ಮಾಡಿ, ಬಳಿಕ ತನಗೆ ಬಂದಿದ್ದ ಪೆನ್ ಡ್ರೈವ್ ಗೆ ಕನೆಕ್ಟ್ ಮಾಡಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ. ಆದರೆ ಆರೋಪಿ ರಿತೇಶ್ ಪಾಂಡೆಗೆ ಪೆನ್ ಡ್ರೈವ್ ತಲುಪಿಸಿದ್ದು ಯಾರು? ಇದಕ್ಕೆ ಎಷ್ಟು ಹಣ ಕೊಡಲಾಗಿತ್ತು? ಇವೆಲ್ಲವೂ ಇನ್ನಷ್ಟೇ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.