ಬೆಂಗಳೂರು : ರಾಜ್ಯ ಸರಕಾರ ಸಾರಿಗೆ ಟಿಕೆಟ್ ದರ, ಹಾಲು ಸೇರಿದಂತೆ ಇನ್ನಿತರೆ ಉತ್ಪನ್ನಗಳ ದರ ಏರಿಕೆ ಮಾಡಿರುವ ಕ್ರಮ ಖಂಡಿಸಿ ಬಿಜೆಪಿ ನಾಳೆ(ನ.5) ರಾಜ್ಯದಾದ್ಯಂತ ಹೋರಾಟ ಮಾಡಲಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಸಾರಿಗೆ ನಿಗಮಗಳಿಗೆ 5,650ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಿದ್ದರೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಇದನ್ನು ಕೊಡದೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ. ಜತೆಗೆ, ಹಾಲಿನ ದರವೂ ಏರಿಕೆ ಮಾಡಲಾಗಿದೆ. ಹೀಗೆ, ಜನ ವಿರೋಧಿ ಆಡಳಿತ ಖಂಡಿಸಿ ನ.5ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಹೋರಾಟ ನಡೆಯಲಿದೆ ಎಂದರು.

ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನೂ ಯಾವುದೇ ಸರಕಾರ ಈವರೆಗೆ ಮಾಡಿಲ್ಲ. ಮನಸೋ ಇಚ್ಛೆ ಹೆಚ್ಚಳ ಮಾಡಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಹೇಳುವಂತೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದ್ದಾರೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನವಾಗಿದೆ. ಸುಮಾರು ಶೇ.40ವರೆಗೂ ಟಿಕೆಟ್ ದರ ಏರಿಸಲಾಗಿದೆ ಎಂದು ತಿಳಿಸಿದರು.

ಹಾಲಿನ ಪ್ರೊ ತ್ಸಾಹಧನವನ್ನು 7ರೂ.ಗೆ ಏರಿಸುವುದಾಗಿ ಮಾತು ಕೊಟ್ಟ ಕಾಂಗ್ರೆಸ್ ನಂತರ ಅದನ್ನು ಮಾಡದೆ ಜನರ ಮೇಲೆ ಹೊರೆ ಹಾಕಿದೆ. ಲೀಟರ್‍ಗೆ 8ರೂ.ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಶುಭಂ ಸ್ಟಾಂಡರ್ಡ್ ಹಾಲಿನ ದರ 12ರೂ., ಮತ್ತೊಂದು ಶುಭಂ ಹಾಲಿನ ದರ 13ರೂ.ಏರಿಸಲಾಗಿದೆ. ಮೊಸರು ಒಂದು ಕೆಜಿಗೆ 25ರೂ. ಜಾಸ್ತಿ ಮಾಡಲಾಗಿದೆ. ಲಸ್ಸಿಗೆ 14ರೂ. ನಿಂದ 16ರೂ.ಮಾಡಲಾಗಿದೆ. ರೈತರಿಗೆ 7 ರೂ.ನೀಡಲಿದ್ದು, ಉಳಿದ ಹಣ ಕಾಂಗ್ರೆಸ್ ನಾಯಕರ ಜೇಬಿಗೆ ಹೋಗುತ್ತದೆ ಎಂದು ಅವರು ಟೀಕಿಸಿದರು.

ದರ ಏರಿಕೆ ಬಗ್ಗೆ ನಾನು ಅಧಿವೇಶನದಲ್ಲೇ ಹೋರಾಟ ಮಾಡಿದ್ದೆ. ಮುಂದೆಯೂ ಮಾಡುತ್ತೇನೆ. ಜನರು ಇದಕ್ಕೆ ಇನ್ನಷ್ಟು ಸ್ಪಂದಿಸಿದರೆ ನಿಜವಾದ ಹೋರಾಟವಾಗುತ್ತದೆ. ಇಲ್ಲವಾದರೆ ರಾಜಕೀಯ ಪ್ರತಿಭಟನೆ ಎಂದು ವಾದ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor