ಎಸ್‍ಟಿ ಸಮುದಾಯಕ್ಕೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು : ಸತೀಶ್ ಜಾರಕಿಹೊಳಿ
ಬೆಂಗಳೂರು : ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು. ಜತೆಗೆ ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಎಸ್‍ಟಿ ಸಮುದಾಯಕ್ಕೆ ಇನ್ನೂ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಈ ಹಿಂದೆ ನಮ್ಮ ಸಮುದಾಯದ ಮೂವರು ಸಚಿವರಿದ್ದರು. ಅದೇ ರೀತಿ ಈಗಲೂ ಮೂರು ಸಚಿವ ಸ್ಥಾನಗಳನ್ನು ನೀಡಬೇಕು’ ಎಂದರು.
ವಿಶ್ವ ವಿದ್ಯಾನಿಲಯಗಳಲ್ಲಿ ಎಸ್‍ಟಿ ಸಮುದಾಯದ ಉಪಕುಲಪತಿಗಳ ನೇಮಕ ಆಗಿಲ್ಲ. ತಕ್ಷಣವೇ ನಮ್ಮ ಸಮುದಾಯದ ವಿಸಿಗಳನ್ನು ನೇಮಕ ಮಾಡಬೇಕು ಎಂದ ಅವರು, ಎಸ್‍ಟಿ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕಿದೆ. ಇದಕ್ಕಾಗಿ ಸರಕಾರ ಹಿರಿಯ ವಕೀಲರನ್ನು ನೇಮಕ ಮಾಡಬೇಕು ಎಂದು ಅವರು ಕೋರಿದರು.
ತರಬೇತಿಗೆ ಪಕ್ಷದ ಸಭೆ: ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಶಾಸಕರಿಗೆ ತರಬೇತಿ ನೀಡಲಾಗುವುದು. ಮತದಾನ ಮಾಡುವ ವೇಳೆ ಶಾಸಕರಿಂದ ಯಾವುದೇ ತಪ್ಪುಗಳಾಗಬಾರದು. ಅದಕ್ಕಾಗಿ ಸರಿಯಾಗಿ ತರಬೇತಿ ನೀಡುವ ಅಗತ್ಯವಿದೆ. ಒಂದೆರಡು ಮತಗಳ ವ್ಯತ್ಯಾಸವಾದರೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಮಸ್ಯೆಯಾಗಲಿದೆ ಎಂದು ಅವರು ತಿಳಿಸಿದರು.