‘ಸಂಪುಟದಲ್ಲಿ ತಮಗೆ ಅವಕಾಶ ಕೊಡಿ’ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಶಾಸಕರ ಮನವಿ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ಸೇರ್ಪಡೆಗೆ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ತೀವ್ರ ಲಾಬಿ ಆರಂಭಿಸಿದ್ದು, ಬೆಂಗಳೂರಿನಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ‘ತಮಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ, ಹಂಪನಗೌಡ ಬಾದರ್ಲಿ, ಅಶೋಕ್ ಪಟ್ಟಣ್, ಮಾಜಿ ಸಚಿವ ಮಾಂಕಾಳ ವೈದ್ಯ ಸೇರಿದಂತೆ ಹಲವಾರು ಮಂದಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ವಿರೋಧವಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಹಲವು ಶಾಸಕರು, ಸಚಿವ ಸಂಪುಟದಲ್ಲಿ ತಮಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆಂದು ಗೊತ್ತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದ ಹಿರಿಯ ಶಾಸಕರಾಗಿರುವ ಆರ್.ವಿ.ದೇಶಪಾಂಡೆ, ‘ಇದು ನನ್ನ ಕೊನೆಯ ಚುನಾವಣೆ. ಹಲವಾರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. 3 ವರ್ಷಗಳಿಂದ ತಮನ್ನು ಸಂಪುಟದಿಂದ ಹೊರಗಿಡಲಾಗಿದೆ. ಸಂಪುಟದಲ್ಲಿ ಬ್ರಾಹಣ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ತಮಗೆ ಅವಕಾಶ ಕೊಡಿಸಬೇಕು ಎಂದು ಖರ್ಗೆಯವರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಭಟ್ಕಳ ಕ್ಷೇತ್ರದ ಶಾಸಕ ಮಾಂಕಾಳ ವೈದ್ಯ, ‘ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮೇಲಾಗಿ ತಾವು ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲೂ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಹಿರಿಯ ಶಾಸಕ ಹಂಪನಗೌಡ ಬಾದರ್ಲಿ, ‘ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಪಕ್ಷದ ನಿಷ್ಠಾವಂತನಾಗಿ ನಾನು ಕೆಲಸ ಮಾಡಿದ್ದೇನೆ. ಈ ಬಾರಿಯ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಿ’ ಎಂದು ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.