2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ವಿಶೇಷ ತನಿಖಾ ತಂಡ (SIT) ರಚಿಸಿ ಮೂರು ತಿಂಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಏನು ಹೇಳಿದೆ? :

ಸ್ಥಳೀಯ ಬೆಳ್ತಂಗಡಿ ಪೊಲೀಸರು, ಸಿಐಡಿ ಹಾಗೂ ಸಿಬಿಐ ನಡೆಸಿದ ತನಿಖೆಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಆಘಾತಕಾರಿ ತೀರ್ಮಾನಗಳೇನು? ಅರ್ಜಿದಾರರು ಆರಂಭದಿಂದಲೂ ಶಂಕೆ ವ್ಯಕ್ತಪಡಿಸುತ್ತಿದ್ದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರ ಪಾತ್ರದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಪೀಠವು ಏನು ಹೇಳಿದೆ? ಈ ಪ್ರಕರಣದಲ್ಲಿ ಸತ್ಯವನ್ನು ಬಯಲಿಗೆಳೆಯಲು ನ್ಯಾಯಾಲಯ ರೂಪಿಸಿರುವ ಹೊಸ ಮಾರ್ಗಸೂಚಿಗಳೇನು?

ಈ ಎಲ್ಲಾ ಪ್ರಮುಖ ಅಂಶಗಳನ್ನು ವಿಸ್ತೃತವಾಗಿ ಪರಿಶೀಲಿಸಿರುವ ನ್ಯಾಯಮೂರ್ತಿ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಂಜೀವ್ ಸಚ್ದೇವ ಅವರನ್ನೊಳಗೊಂಡ ಪೀಠವು, ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸದಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ 'ಡಿ ನೊವೊ' ಅಂದ್ರೆ ಸಂಪೂರ್ಣ ಮರು ತನಿಖೆ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಈ ಭೀಕರ ಪ್ರಕರಣದಲ್ಲಿ ಹಿಂದಿನ ತನಿಖಾ ಸಂಸ್ಥೆಗಳು ಸಾಕ್ಷ್ಯ ಸಂಗ್ರಹಿಸಿ ತನಿಖೆ ನಡೆಸಿದ ರೀತಿಯು ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಾನೂನಿನ ಹಿಡಿತದಿಂದ ಯಾರನ್ನಾದರೂ ಪಾರು ಮಾಡುವ ದುರುದ್ದೇಶದಿಂದ ತನಿಖೆ ನಡೆದಿದೆ ಎಂದು ಸಾಂವಿಧಾನಿಕ ನ್ಯಾಯಾಲಯಕ್ಕೆ ಮನವರಿಕೆಯಾದಾಗ, ಸತ್ಯವನ್ನು ಹೊರತರಲು ಸ್ವತಂತ್ರ ಸಂಸ್ಥೆಯ ಮೂಲಕ ಹೊಸದಾಗಿ ತನಿಖೆ ನಡೆಸಲು ಆದೇಶಿಸುವ ಪೂರ್ಣ ಅಧಿಕಾರ ನ್ಯಾಯಾಂಗಕ್ಕಿದೆ ಎಂದು ಪೀಠವು ಹೇಳಿದೆ.

ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ನಾಗರಿಕನಿಗೆ ನ್ಯಾಯಯುತ ವಿಚಾರಣೆಯಷ್ಟೇ ನ್ಯಾಯಸಮ್ಮತ ಮತ್ತು ನಿಷ್ಪಕ್ಷ ತನಿಖೆಯ ಹಕ್ಕೂ ಸಂವಿಧಾನಬದ್ಧವಾಗಿ ಖಾತರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ತನಿಖಾ ಸಂಸ್ಥೆಗಳು ಕಳಂಕಿತ ಅಥವಾ ಪೂರ್ವಗ್ರಹಪೀಡಿತ ರೀತಿಯಲ್ಲಿ ತನಿಖೆ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಪೀಠವು ನೆನಪಿಸಿದೆ. ನ್ಯಾಯಾಂಗವು ಮಧ್ಯಪ್ರವೇಶಿಸದಿದ್ದರೆ ಅಂತಿಮವಾಗಿ ನ್ಯಾಯವೇ ಮಣ್ಣುಪಾಲಾಗುವ ಅಸಾಧಾರಣ ಸಂದರ್ಭಗಳಲ್ಲಿ ನ್ಯಾಯಾಲಯಗಳು ಕಠಿಣ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನೈಜ ಸತ್ಯವನ್ನು ಮುಚ್ಚಿಡಲು ಅಥವಾ ಎದ್ದು ಕಾಣುವ ಲೋಪಗಳನ್ನು ಮರೆಮಾಚಲು ಪ್ರಯತ್ನಿಸಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿದ್ದು, ಅಂತಹ ಲೋಪಗಳನ್ನು ನ್ಯಾಯಾಲಯವು ಕಾನೂನಿನ ಚೌಕಟ್ಟಿನೊಳಗೆ ಅತ್ಯಂತ ಕಠಿಣವಾಗಿ ಮಟ್ಟಹಾಕಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ನೈಜ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನ ಬೋನಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಇತರ ಪ್ರಾಧಿಕಾರಗಳು ನೂತನ ವಿಶೇಷ ತನಿಖಾ ತಂಡಕ್ಕೆ ಅಗತ್ಯವಿರುವ ಸಂಪೂರ್ಣ ನೆರವನ್ನು ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಸುಳ್ಳು ಆರೋಪ ಹೊತ್ತ ವ್ಯಕ್ತಿಗೆ ಕಾಲಕ್ರಮೇಣ ಪರಿಹಾರ ನೀಡಬಹುದು, ಆದರೆ ಅತಿ ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಬಾಲಕಿಗೆ ಆದ ಅನ್ಯಾಯವನ್ನು ಎಂದಿಗೂ ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಪೀಠವು ಅತ್ಯಂತ ನೋವಿನಿಂದ ನುಡಿದಿದೆ.

ಇಂತಹ ಭೀಕರ ಕೃತ್ಯ ಎಸಗಿದ ನೈಜ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸದಿದ್ದರೆ ಇಡೀ ಸಮಾಜವೇ ತನ್ನ ಕರ್ತವ್ಯದಲ್ಲಿ ಸಂಪೂರ್ಣವಾಗಿ ವಿಫಲವಾದಂತಾಗುತ್ತದೆ ಎಂದು ನ್ಯಾಯಾಲಯವು ಕಟುವಾಗಿ ಹೇಳಿದೆ.

ಈ ಹಿಂದೆ ಸ್ಥಳೀಯ ಬೆಳ್ತಂಗಡಿ ಪೊಲೀಸರು, ಸಿಐಡಿ ಹಾಗೂ ಸಿಬಿಐ ನಡೆಸಿದ ತನಿಖಾ ವೈಖರಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಪರಾಧ ಎಸಗಲು ಸಂಪೂರ್ಣ ಅಸಮರ್ಥನಾಗಿದ್ದ ವ್ಯಕ್ತಿಯನ್ನೇ ಪ್ರಮುಖ ಆರೋಪಿಯನ್ನಾಗಿ ಬಿಂಬಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಪೀಠವು ಹೇಳಿದೆ.

ಪ್ರಕರಣದಲ್ಲಿ ಈವರೆಗಿನ ತನಿಖೆಯು ಸಂತ್ರಸ್ತೆಗೆ ನ್ಯಾಯ ಸಿಗದಂತೆ ಮಾಡುವ ದಿಕ್ಕಿನಲ್ಲೇ ಸಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನೈಜ ಅಪರಾಧಿಗಳು ತನಿಖೆಯನ್ನು ತಮ್ಮ ಪರವಾಗಿ ತಿರುಚಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಪ್ರಕರಣ ನಡೆದು ಹಲವು ವರ್ಷಗಳು ಕಳೆದಿದ್ದು, ಆರಂಭದ 'ಗೋಲ್ಡನ್ ಅವರ್' ಅವಧಿಯಲ್ಲಿ ಸಂಗ್ರಹಿಸದ ಸಾಕ್ಷ್ಯಾಧಾರಗಳು ಈಗ ಲಭ್ಯವಾಗುವುದಿಲ್ಲ, ಹಾಗಾಗಿ ಮರು ತನಿಖೆಗೆ ಅನುಮತಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಹೈಕೋರ್ಟ್‌ನ ತೀರ್ಮಾನವು ಸಂಪೂರ್ಣ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೈಕೋರ್ಟ್‌ನ ಆ ತೀರ್ಮಾನವು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ವಿಚಾರಣಾ ನ್ಯಾಯಾಲಯದಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಡಿಎನ್‌ಎ ವಿಭಾಗದ ತಜ್ಞರು ನೀಡಿರುವ ಸಾಕ್ಷ್ಯವನ್ನು ನ್ಯಾಯಪೀಠವು ತನ್ನ ಆದೇಶದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದೆ.

ಸಂತ್ರಸ್ತೆಯ ಚೂಡಿದಾರ್ ಮೇಲ್ಭಾಗದ ಬಟ್ಟೆಯಲ್ಲಿ ಆರೋಪಿಯ ಕೂದಲಿನ ಜೊತೆಗೆ ಇತರ ವ್ಯಕ್ತಿಗಳ ಕೂದಲಿನ ಮಾದರಿಗಳೂ ಪತ್ತೆಯಾಗಿವೆ ಎಂದು ತಜ್ಞರು ದೃಢಪಡಿಸಿರುವುದನ್ನು ನ್ಯಾಯಾಲಯ ಗಮನಿಸಿದೆ.

ಮುಂದೆ ಸಂಶಯಾಸ್ಪದ ವ್ಯಕ್ತಿಗಳು ಪತ್ತೆಯಾದಲ್ಲಿ, ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಆ ಕೂದಲಿನ ಮಾದರಿಯೊಂದಿಗೆ ಡಿಎನ್‌ಎ ಹೋಲಿಕೆ ಪರೀಕ್ಷೆ ನಡೆಸಿ ಸತ್ಯವನ್ನು ಸಾಬೀತುಪಡಿಸಲು ಈಗಲೂ ಸಂಪೂರ್ಣ ಅವಕಾಶವಿದೆ ಎಂದು ತಜ್ಞರು ತಿಳಿಸಿರುವುದನ್ನು ಪೀಠವು ಎತ್ತಿಹಿಡಿದಿದೆ.

ಆದ್ದರಿಂದ ಪ್ರಮುಖ ವೈಜ್ಞಾನಿಕ ಸಾಕ್ಷ್ಯಗಳು ಶಾಶ್ವತವಾಗಿ ಕಳೆದುಹೋಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿದಾರರು ಸಲ್ಲಿಸಿದ್ದ ಹೆಚ್ಚುವರಿ ಪ್ರಮಾಣಪತ್ರದಲ್ಲಿ ಹೆಸರಿಸಲಾದ ಎಂಟು ಮಂದಿ ಪ್ರಮುಖ ಸಂಭಾವ್ಯ ಸಾಕ್ಷಿಗಳನ್ನು ಕರ್ನಾಟಕ ರಾಜ್ಯ ಪೊಲೀಸರು ಕೇವಲ ಮೂರು ವಾರಗಳ ಅವಧಿಯಲ್ಲಿ ಪತ್ತೆಹಚ್ಚಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.

ರಾಜ್ಯ ಪೊಲೀಸರಿಗೆ ಕೆಲವೇ ವಾರಗಳಲ್ಲಿ ಆ ಸಾಕ್ಷಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುವುದಾದರೆ, ಹಿಂದೆ ಸುದೀರ್ಘ ತನಿಖೆ ನಡೆಸಿದ ಸ್ಥಳೀಯ ಪೊಲೀಸ್, ಸಿಐಡಿ ಹಾಗೂ ಸಿಬಿಐ ಎಂಬ ಮೂರು ಪ್ರಮುಖ ತನಿಖಾ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ಈ ಮಹತ್ವದ ಸುಳಿವುಗಳನ್ನು ಹಿಂಬಾಲಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯವು ಗಂಭೀರ ಪ್ರಶ್ನೆ ಎತ್ತಿದೆ.

ಇದು ಈ ಹಿಂದಿನ ತನಿಖೆಗಳ ದೊಡ್ಡ ವೈಫಲ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಪೀಠವು ತೀರ್ಮಾನಿಸಿದೆ.

ವಿಚಾರಣಾ ನ್ಯಾಯಾಲಯವು ಸಂತೋಷ್ ರಾವ್‌ನನ್ನು ಖುಲಾಸೆಗೊಳಿಸುವಾಗ ದಾಖಲಿಸಿದ್ದ ಪ್ರಮುಖ ತನಿಖಾ ನ್ಯೂನತೆಗಳನ್ನು ಸುಪ್ರೀಂ ಕೋರ್ಟ್ ವಿಸ್ತೃತವಾಗಿ ಪರಿಶೀಲಿಸಿದೆ. ಸಂತ್ರಸ್ತೆಯ ಯೋನಿ ಸ್ವ್ಯಾಬ್ ಅನ್ನು ವೈಜ್ಞಾನಿಕವಾಗಿ ಸರಿಯಾಗಿ ಸಂರಕ್ಷಿಸದೆ ನಿರ್ಲಕ್ಷ್ಯ ತೋರಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

ಸೂಕ್ತವಾಗಿ ಶೇಖರಿಸಿಡದ ಕಾರಣ ಅದರಲ್ಲಿ ಶಿಲೀಂಧ್ರ ಬೆಳೆದು ಯಾವುದೇ ಡಿಎನ್‌ಎ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಅಂಶವನ್ನು ನ್ಯಾಯಪೀಠವು ಉಲ್ಲೇಖಿಸಿದೆ.

ಅತ್ಯಾಚಾರದಂತಹ ಗಂಭೀರ ಅಪರಾಧಗಳಲ್ಲಿ ನೈಜ ಆರೋಪಿಯನ್ನು ಸಾಬೀತುಪಡಿಸಲು ಅತ್ಯಂತ ಪ್ರಬಲವಾಗಬೇಕಿದ್ದ ಇಂತಹ ವೈದ್ಯಕೀಯ ಸಾಕ್ಷ್ಯವನ್ನು, ನೈಜ ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಹಾಳುಗೆಡವಲಾಗಿದೆ ಎಂಬ ವಿಚಾರಣಾ ನ್ಯಾಯಾಲಯದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಅಪರಾಧ ನಡೆದ ದಿನ ಆ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರೂ ಮೃತದೇಹ ಪತ್ತೆಯಾದ ಜಾಗದಲ್ಲಿದ್ದ ಕಾಲೇಜು ಬ್ಯಾಗ್ ಮತ್ತು ಅದರೊಳಗಿನ ಪುಸ್ತಕಗಳು ಸಂಪೂರ್ಣ ಒಣಗಿದ ಸ್ಥಿತಿಯಲ್ಲಿದ್ದವು ಎಂದು ಸಾಕ್ಷ್ಯಗಳು ಹೇಳಿರುವುದನ್ನು ನ್ಯಾಯಪೀಠವು ಪ್ರಸ್ತಾಪಿಸಿದೆ.

ಇದರಿಂದಾಗಿ ಅಪರಾಧವು ಬೇರೆ ಎಲ್ಲೋ ನಡೆದು, ನಂತರ ಶವವನ್ನು ಹಾಗೂ ಬ್ಯಾಗನ್ನು ತಂದು ಆ ಪೊದೆಯಲ್ಲಿ ಎಸೆಯಲಾಗಿದೆ ಎಂಬ ಬಲವಾದ ಅಂಶ ಸಾಬೀತಾಗುತ್ತಿದ್ದರೂ, ತನಿಖಾಧಿಕಾರಿಗಳು ಈ ಆಯಾಮವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು ಎಂದು ನ್ಯಾಯಾಲಯ ಆಕ್ಷೇಪಿಸಿದೆ.

ಮರಣೋತ್ತರ ಪರೀಕ್ಷೆಯನ್ನು ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದೆ ರಾತ್ರಿ ವೇಳೆಯಲ್ಲಿ ತುರಾತುರಿಯಲ್ಲಿ ನಡೆಸಿದ್ದೇಕೆ ಮತ್ತು ಆ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಏಕೆ ಮಾಡಲಿಲ್ಲ ಎಂದು ನ್ಯಾಯಪೀಠವು ಪ್ರಶ್ನಿಸಿದೆ.

ಘಟನಾ ಸ್ಥಳದ ಸಮೀಪದಲ್ಲಿದ್ದ ಪ್ರಕೃತಿ ಚಿಕಿತ್ಸಾಲಯದ ಮುಖ್ಯ ದ್ವಾರದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಳ್ಳದಿರುವುದು ಮತ್ತು ಸಂಗ್ರಹಿಸಲಾಗಿದ್ದ ಮೊಬೈಲ್ ಟವರ್ ಡಂಪ್ ಮಾಹಿತಿಯನ್ನು ಮುಂದಿನ ಅಧಿಕಾರಿಗೆ ಹಸ್ತಾಂತರಿಸದೆ ಮುಚ್ಚಿಟ್ಟಿರುವುದು ತನಿಖೆಯಲ್ಲಿ ಎಸಗಲಾದ ಅತ್ಯಂತ ಗಂಭೀರ ಲೋಪಗಳು ಎಂದು ನ್ಯಾಯಾಲಯವು ತಿಳಿಸಿದೆ.

ಅಲ್ಲದೆ, ಈ ಹಿಂದೆ ಆರೋಪಿಯಾಗಿದ್ದ ಸಂತೋಷ್ ರಾವ್ ಮೈಮೇಲಿದ್ದ ಗಾಯಗಳು ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದಾಗ ಉಂಟಾಗಿದ್ದವು ಎಂಬುದು ಸಾಬೀತಾಗಿದ್ದು, ಆತ ಫಿಮೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆತನಿಗೆ ಆ ಕೃತ್ಯ ಎಸಗಲು ಸಾಧ್ಯವೇ ಇರಲಿಲ್ಲ ಎಂಬ ವೈದ್ಯರ ಸ್ಪಷ್ಟ ವರದಿಯನ್ನು ತನಿಖಾ ತಂಡಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಆರಂಭದಿಂದಲೂ ಸಂತ್ರಸ್ತೆಯ ಪೋಷಕರು ಮತ್ತು ಸ್ಥಳೀಯ ನಾಗರಿಕರು ಮಲ್ಲಿಕ್ ಜೈನ್, ಧೀರಜ್ ಜೈನ್ ಹಾಗೂ ಉದಯ್ ಕುಮಾರ್ ಜೈನ್ ಎಂಬ ಮೂವರು ವ್ಯಕ್ತಿಗಳ ಮೇಲೆ ಬಲವಾದ ಸಂಶಯ ವ್ಯಕ್ತಪಡಿಸಿದ್ದ ಅಂಶವನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ವಿವರವಾಗಿ ಉಲ್ಲೇಖಿಸಿದೆ.

ಘಟನೆಯ ನಂತರ ಸಂತೋಷ್ ರಾವ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದವರಲ್ಲಿ ಮಲ್ಲಿಕ್ ಜೈನ್ ಮತ್ತು ಅಶ್ರಿತ್ ಜೈನ್ ಪ್ರಮುಖರಾಗಿದ್ದರು ಎಂಬ ವಿಚಾರಣಾ ನ್ಯಾಯಾಲಯದ ದಾಖಲೆಯನ್ನು ಪೀಠವು ಗಮನಿಸಿದೆ. ಆದರೆ, ಸಂತ್ರಸ್ತೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ್ದ ಈ ವ್ಯಕ್ತಿಗಳ ಪಾತ್ರದ ಕುರಿತು ವಿವರವಾದ ತನಿಖೆ ನಡೆಸಿ ಅವರನ್ನು ವಿಚಾರಣೆಗೆ ಒಳಪಡಿಸುವ ಬದಲು, ತನಿಖಾ ಸಂಸ್ಥೆಗಳು ಅವರನ್ನೇ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನಾಗಿ ಮಾಡಿಕೊಂಡಿದ್ದವು ಎಂಬ ಅಸಹಜ ನಡವಳಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ತೋರಿಸಿದೆ.

ಈ ಮೂವರು ವ್ಯಕ್ತಿಗಳನ್ನು ವಿಚಾರಣಾ ನ್ಯಾಯಾಲಯವು ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಲು ಸಮನ್ಸ್ ಜಾರಿ ಮಾಡಿದ್ದಾಗ, ಅವರು ಹೈಕೋರ್ಟ್ ಮೆಟ್ಟಿಲೇರಿ ಆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದ ಮತ್ತು ನಂತರ ಸಿಆರ್‌ಪಿಸಿ ಸೆಕ್ಷನ್ 319ರ ಅಡಿಯಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದ್ದ ಸಂಪೂರ್ಣ ಕಾನೂನು ಇತಿಹಾಸವನ್ನು ಪೀಠವು ಪರಾಮರ್ಶಿಸಿದೆ.

ಸಿಬಿಐ ನಡೆಸಿದ ತನಿಖೆಯಲ್ಲಿ ಈ ಮೂವರಿಗೂ ಪಾಲಿಗ್ರಾಫ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳನ್ನು ನಡೆಸಿ ಕ್ಲೀನ್ ಚಿಟ್ ನೀಡಲಾಗಿತ್ತು ಎಂಬ ಅಂಶವನ್ನೂ ನ್ಯಾಯಪೀಠವು ಉಲ್ಲೇಖಿಸಿದೆ. ಆದರೂ, ಸ್ಥಳೀಯರು ಮತ್ತು ಕುಟುಂಬಸ್ಥರು ಇವರ ಹೆಸರನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದರೂ, ತನಿಖಾಧಿಕಾರಿಗಳು ಆ ದಿಕ್ಕಿನಲ್ಲಿ ಯಾವುದೇ ಸಕಾರಾತ್ಮಕ ವಸ್ತುನಿಷ್ಠ ದಾಖಲೆಗಳನ್ನು ಕಲೆಹಾಕದೆ ಬಿಟ್ಟಿದ್ದರ ಬಗ್ಗೆ ವಿಚಾರಣಾ ನ್ಯಾಯಾಲಯ ವ್ಯಕ್ತಪಡಿಸಿದ್ದ ಅನುಮಾನಗಳನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ದಾಖಲಿಸಿದೆ.

ಅದೇ ಸಮಯದಲ್ಲಿ, ನೂತನ ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಯಾವುದೇ ಪೂರ್ವಾಗ್ರಹಕ್ಕೆ ಆಸ್ಪದವಿರಬಾರದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡಿದೆ. ಈ ತೀರ್ಪಿನಲ್ಲಿ ಮಾಡಲಾದ ಯಾವುದೇ ಅವಲೋಕನಗಳು ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರ ಪಾತ್ರದ ಕುರಿತು ನ್ಯಾಯಾಲಯವು ವ್ಯಕ್ತಪಡಿಸಿದ ಮೇಲ್ನೋಟದ ಅಥವಾ ಅಂತಿಮ ಅಭಿಪ್ರಾಯವಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.

ಈ ಹಿಂದೆ ಆರೋಪಿಯಾಗಿದ್ದ ಸಂತೋಷ್ ರಾವ್ ಈಗಾಗಲೇ ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಿ ಸೆಷನ್ಸ್ ನ್ಯಾಯಾಲಯದಿಂದ ಖುಲಾಸೆಗೊಂಡಿರುವುದರಿಂದ, ಆತನಿಗೆ ಸಂವಿಧಾನದ 20(2)ನೇ ವಿಧಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 300ರ ಅಡಿಯಲ್ಲಿ 'ಡಬಲ್ ಜಿಯೋಪಾರ್ಡಿ'ಯಿಂದ ರಕ್ಷಣೆ ಲಭಿಸಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಆದ್ದರಿಂದ ಆತನನ್ನು ಈ ಪ್ರಕರಣದಲ್ಲಿ ಮತ್ತೆ ಯಾವುದೇ ಮರು ತನಿಖೆ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಪೀಠವು ಆದೇಶಿಸಿದೆ.

ನೂತನವಾಗಿ ರಚನೆಯಾಗುವ ವಿಶೇಷ ತನಿಖಾ ತಂಡವು ಅತ್ಯಾಧುನಿಕ ತನಿಖಾ ತಂತ್ರಜ್ಞಾನದಲ್ಲಿ ಅತ್ಯಂತ ನಿಪುಣರಾದ ಸಮರ್ಥ ತನಿಖಾಧಿಕಾರಿಗಳನ್ನು ಒಳಗೊಂಡಿರಬೇಕು ಮತ್ತು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದರ ನೇತೃತ್ವ ವಹಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.

ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ, ರಾಜ್ಯ ಸಿಐಡಿ ಅಥವಾ ಸಿಬಿಐ ತಂಡಗಳಲ್ಲಿ ಈ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯೂ ನೂತನ ಎಸ್‌ಐಟಿ ತಂಡದಲ್ಲಿ ಯಾವುದೇ ಕಾರಣಕ್ಕೂ ಇರಬಾರದು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಷರತ್ತು ವಿಧಿಸಿದೆ.

ಪ್ರಕರಣದಲ್ಲಿ ಸಂಶಯದ ವ್ಯಾಪ್ತಿಯಲ್ಲಿದ್ದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಸೇರಿದಂತೆ ಯಾವುದೇ ವ್ಯಕ್ತಿಗಳ ಪಾತ್ರದ ಕುರಿತು ನ್ಯಾಯಾಲಯವು ಯಾವುದೇ ಅಂತಿಮ ಅಥವಾ ಮೇಲ್ನೋಟದ ತೀರ್ಮಾನವನ್ನು ವ್ಯಕ್ತಪಡಿಸಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.

ಈ ಆದೇಶದಲ್ಲಿ ಉಲ್ಲೇಖಿಸಲಾದ ಯಾವುದೇ ಅವಲೋಕನಗಳಿಂದ ಪ್ರಭಾವಿತರಾಗದೆ, ಎಸ್‌ಐಟಿ ತಂಡವು ಕೇವಲ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಂಪೂರ್ಣ ಸ್ವತಂತ್ರವಾಗಿ ಮತ್ತು ವಸ್ತುನಿಷ್ಠವಾಗಿ ತನಿಖೆ ನಡೆಸಬೇಕು ಎಂದು ತಾಕೀತು ಮಾಡಲಾಗಿದೆ.

ಈ ಸಂಪೂರ್ಣ ಮರು ತನಿಖೆಯನ್ನು ಕಟ್ಟುನಿಟ್ಟಾಗಿ ಮೂರು ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸಂಬಂಧಪಟ್ಟ ಸಕ್ಷಮ ನ್ಯಾಯಾಲಯಕ್ಕೆ ಪೊಲೀಸರು ಅಂತಿಮ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor