ಮೇಲ್ಮನೆಯಲ್ಲಿ ‘ಸಾಲಮನ್ನಾ’ ಚರ್ಚೆ: ಆರೋಪ-ಪ್ರತ್ಯಾರೋಪ
ಬೆಂಗಳೂರು : ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಪರಿಷತ್‍ನಲ್ಲಿ ಮಂಗಳವಾರ ನಡೆದ ಚರ್ಚೆ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ, ಗದ್ದಲ ನಡೆಯಿತು. ರೈತರ ಸಂಕಷ್ಟ, ಸಾಲ ಮನ್ನಾ ಹಾಗೂ ಕೇಂದ್ರ ಸರಕಾರದ ಕ್ರಮಗಳ ಕುರಿತು ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದರು.
ಚರ್ಚೆ ವೇಳೆ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ಈಗ ಪ್ರಧಾನಿ ಮೋದಿ ಅವರು ರೈತರ ಖಾತೆಗಳಿಗೆ 14.50 ಲಕ್ಷ ಕೋಟಿ ಹಣ ಹಾಕಿದ್ದಾರೆ. ನೀವು ರೈತರಿಗೆ ಒಂದು ರೂಪಾಯಿ ಆದರೂ ಕೊಟ್ಟಿದ್ದೀರಾ? ಎಂದು ಸರಕಾರವನ್ನು ಪ್ರಶ್ನಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಕ್ರಿಯಿಸಲು ಮುಂದಾದಾಗ ಸದನದಲ್ಲಿ ಗದ್ದಲ ಉಂಟಾಯಿತು. ಸಚಿವರಾದ ಅಜಯ್ ಸಿಂಗ್, ವಿಜಯಾನಂದ ಕಾಶಪ್ಪನವರ್ ಹಾಗೂ ಎಂ.ಬಿ.ಪಾಟೀಲ್ ಅವರು ವಿಪಕ್ಷ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸದಸ್ಯರ ವರ್ತನೆಗೆ ಬೇಸತ್ತ ಸಭಾಪತಿ ಸಲೀಂ ಅಹ್ಮದ್, ಇದೇನು ಫಿಶ್ ಮಾರ್ಕೆಟೇ? ಎಂದು ಪ್ರಶ್ನಿಸಿದರು. ಒಬ್ಬರಿಗೊಬ್ಬರು ಅಗೌರವ ತರುವ ರೀತಿ ವರ್ತಿಸಬೇಡಿ. ಜನರು ನಮ್ಮನ್ನು ನೋಡುತ್ತಿದ್ದಾರೆ. ಏಕಾಏಕಿ ಎದ್ದೇಳಬೇಡಿ ಎಂದು ಎದ್ದು ನಿಂತು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, ಪ್ರಧಾನಿ ನರೇಂದ್ರ ಮೋದಿ 800 ರೈತರ ಪ್ರಾಣ ತೆಗೆದಿದ್ದಾರೆ ಎಂದು ಹೇಳುತ್ತಿದ್ದಂತೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದರು. ಹರಿಪ್ರಸಾದ್ ಅವರು ಇದೇ ಆರೋಪವನ್ನು ಮತ್ತೊಮ್ಮೆ ಪುನರುಚ್ಚರಿಸಿದರು. ಸದನದಲ್ಲಿ ತೀವ್ರ ವಾಗ್ವಾದ ಉಂಟಾಗಿತು.
ಸಾಲಮನ್ನಾ ಗದ್ದಲ: ಬರ ಚರ್ಚೆ ವೇಳೆ ರೈತರ ಸಾಲ ಮನ್ನಾ ವಿಚಾರವೂ ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ಸರಕಾರ ಕೆಲವರ ಸಾಲಮನ್ನಾ ಮಾಡುತ್ತಿದೆ ಎಂದು ಪ್ರಸ್ತಾಪಿಸಿದರು. ಇತ್ತೀಚೆಗೆ ಜೀ ಟಿವಿಗೆ ಸಂಬಂಧಿಸಿದ ಸಾಲ ಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದಾಗ ಬಿಜೆಪಿ ಸದಸ್ಯ ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ಎನ್‍ಡಿಎ ಸರಕಾರದ ಅವಧಿಯಲ್ಲಿ ಯಾರ ಸಾಲವನ್ನೂ ಮನ್ನಾ ಮಾಡಿಲ್ಲ. ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುತ್ತೀರಾ? ಎಂದು ಸಿ.ಟಿ.ರವಿ ಸವಾಲು ಹಾಕಿದರು.
ಸಿ.ಟಿ.ರವಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮುಂದಾದ ಸಚಿವ ಎಂ.ಬಿ.ಪಾಟೀಲ್, ನಾನು ನಿಮಗೆ ದಾಖಲೆ ಕೊಡುತ್ತೇನೆ ಎಂದು ಹೇಳಿದರು.
ಸಚಿವರ ಹಾಜರಾತಿಗೂ ಬರ: ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲೇ ಸಚಿವರ ಗೈರುಹಾಜರಿ ವಿಪಕ್ಷದ ಆಕ್ರೋಶಕ್ಕೆ ಕಾರಣವಾಯಿತು. ಚರ್ಚೆ ಆರಂಭಕ್ಕೂ ಮುನ್ನ ಸದನದಲ್ಲಿ ಸಚಿವರ ಹಾಜರಾತಿ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಸದನದಲ್ಲಿ 15 ಸಚಿವರು ಹಾಜರಿರಬೇಕಾಗಿದ್ದರೂ, ಕೇವಲ ಮೂವರು ಸಚಿವರು ಮಾತ್ರ ಹಾಜರಿದ್ದರು ಎಂದು ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ಬಿಜೆಪಿಯ ಸಿ.ಟಿ.ರವಿ, ರವಿಕುಮಾರ್ ಹಾಗೂ ಜೆಡಿಎಸ್‍ನ ಭೋಜೇಗೌಡ ಸೇರಿದಂತೆ ಸದಸ್ಯರು, ‘ಬರದ ಬಗ್ಗೆ ಚರ್ಚೆಗೆ ಸಚಿವರಿಗೇ ಬರ ಬಂದಿದೆ. ಮಂತ್ರಿಗಳಿಗೆ ಬರ ಬಂದಿದೆ’ ಎಂದು ವ್ಯಂಗ್ಯವಾಡಿದರು.
ವಿಪಕ್ಷ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ಗೈರಾಗಿರುವ ಸಚಿವರನ್ನು ಸದನಕ್ಕೆ ಕರೆಸುವುದಾಗಿ ತಿಳಿಸಿದರು. ಬಳಿಕ ಸಚಿವರ ಹಾಜರಾತಿ ವಿಚಾರದ ಗದ್ದಲಕ್ಕೆ ತೆರೆ ಬಿದ್ದು, ನಿಗದಿತ ವಿಷಯಗಳ ಚರ್ಚೆ ಮುಂದುವರಿಯಿತು.